

ಚಿತ್ರದುರ್ಗ: ರಾಜ್ಯಾದ್ಯಂತ ಹಿಂದು, ಮುಸ್ಲಿಂ, ಕ್ರೈಸ್ತ ಭೂಮಿಗಳ ಮೇಲೆ ವಕ್ಫ್ ಹಿಡಿತ ಸಾಧಿಸುವುದನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಒತ್ತಾಯಿಸಿದ್ದಾರೆ.
ನಾಡಿನೆಲ್ಲೆಡೆ ವಕ್ಫ್ ಆಸ್ತಿ ಸಂಬಂಧ ಗದ್ದಲಗಳು ಮಾರ್ದನಿಸಿದ್ದು, ರೈತರು ಒಳಗೊಂಡಂತೆ ಹಿಂದು, ಕ್ರೈಸ್ತ, ಮುಸ್ಲಿಂ ಸಮುದಾಯದವರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ವಕ್ಫ್ ಬೋರ್ಡ್‌ನಿಂದ ರೈತರ, ಶ್ರೀಸಾಮಾನ್ಯರ ಭೂಮಿಯ ಅತಿಕ್ರಮಣದ ವಿವರಗಳು ನಿತ್ಯವೆಂಬಂತೆ ಹಲವು ಜಿಲ್ಲೆಗಳಿಂದ ಹೊರ ಬರುತ್ತಿದೆ. ವಿಜಯಪುರ, ಹಾವೇರಿ, ಬಾಗಲಕೋಟೆ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ಜನರಿದ್ದಾರೆ. ಸಂಬಂಧಿಸಿದ ಸಚಿವರು ವಕ್ಫ್ ಆಸ್ತಿ ಅತಿಕ್ರಮಣದ ನೆಪದಲ್ಲಿ ರೈತರಿಗೆ ನೋಟಿಸ್ ಜಾರಿಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿರುವುದು ಸಮಸ್ಯೆ ಉಲ್ಭಣಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ನಡೆಸಬೇಕು. ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಂಡು ವಕ್ಫ್ ಆಕ್ರಮಣ ನೀತಿಗೆ ತಡೆ ನೀಡಬೇಕು. ಅಗತ್ಯ ಬಂದಲ್ಲಿ 1975ರ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ಹಾಲಿ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆದಿರಬಹುದು. ಇದು ತಾತ್ಕಾಲಿಕ ಕ್ರಮವಷ್ಟೇ. ಮುಂದೆ ಬರುವ ಸರ್ಕಾರಗಳು ಇದೇ ನೀತಿ ಅನುಸರಿಸುತ್ತಾರೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಹಾಗಾಗಿ ಈಗಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ಮೂಲಕ ಶ್ರೀಸಾಮಾನ್ಯರ ಆತಂಕ ದೂರ ಮಾಡಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.