ಬೆಳಗಾವಿ: ಛತ್ರಿಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ಹೋರಾಟದ ಇತಿಹಾಸದ ಗತವೈಭವವನ್ನು ಸಾರುವ ಶಿವಸೃಷ್ಟಿ ಯೋಜನೆಗೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ದಶಕದ ಬಳಿಕ ಫೆಬ್ರವರಿಯಲ್ಲಿಯೇ ಲೋಕಾರ್ಪಣೆಗೆ ಸಜ್ಜಾಗಿದೆ.
ನಗರದ ಶಿವಾಜಿ ಉದ್ಯಾನದಲ್ಲಿ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ) ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಸಲಕರಣೆ ಒಳಗೊಂಡಿರುವ ಶಿವಸೃಷ್ಟಿ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದೆ. ಧ್ವನಿ ಮತ್ತು ಬೆಳಕಿನ ಮೂಲಕ ಇತಿಹಾಸ ತಿಳಿಸುವ ಶಿವಸೃಷ್ಟಿ ಯೋಜನೆ ಹೈಟೆಕ್ ಸೌಲಭ್ಯ ಒಳಗೊಂಡಿದೆ. ಅದಕ್ಕಾಗಿ ಬುಡಾ ಸುಮಾರು 7 ಕೋಟಿ ರೂ. ಖರ್ಚು ಮಾಡಿದೆ.
ತಂತ್ರಜ್ಞಾನ ಯುಗದಲ್ಲಿ ಮುಳಗಿರುವ, ಭಾರತೀಯರ ಪರಂಪರೆ ಇತಿಹಾಸವನ್ನು ಮರೆಯುತ್ತಿರುವ ಯುವ ಸಮುದಾಯಕ್ಕೆ ಛತ್ರಿಪತಿ ಶಿವಾಜಿ ಮಹಾರಾಜರ ಹೋರಾಟದ ಇತಿಹಾಸದ ಗತವೈಭವ ತಿಳಿಸುವ ಉದ್ದೇಶದಿಂದ ಬುಡಾ 2012ರಲ್ಲಿ ನವೆಂಬರ್‌ನಲ್ಲಿ ಶಿವಸೃಷ್ಟಿ ಯೋಜನೆ ಕೈಗೆತ್ತಿಕೊಂಡಿತ್ತು. ಆದರೆ, 2013ರಲ್ಲಿ ಸ್ಥಳೀಯ ಮಟ್ಟದಲ್ಲಿ ಬದಲಾದ ರಾಜಕಾರಣದಿಂದಾಗಿ ಶಿವಸೃಷ್ಟಿ ಯೋಜನೆ ಅರ್ಧದಲ್ಲಿಯೇ ಮೊಟಕುಗೊಂಡಿತು. ಕಾಮಗಾರಿ ಪೂರ್ಣಗೊಳ್ಳದಿದ್ದರೂ 2017ರಲ್ಲಿ ಅಂದಿನ ಮಹಾನಗರ ಪಾಲಿಕೆ ಮೇಯರ್ ಅವರು ಉದ್ಘಾಟಿಸಿದರು. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ.
2018ರಲ್ಲಿ ಶಾಸಕ ಅಭಯ ಪಾಟೀಲ ಅವರು ಶಿವಸೃಷ್ಟಿ ಯೋಜನೆ ಕೈಗೆತ್ತಿಕೊಂಡು ಕಾಮಗಾರಿ ಮರು ಆರಂಭಿಸಿದರು. ಇದೀಗ ಶಿವಸೃಷ್ಟಿ ಯೋಜನೆ ಪೂರ್ಣಗೊಂಡಿದ್ದು, ಶಿವಾಜಿ ಉದ್ಯಾನದಲ್ಲಿ
ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಚಿತ್ರಿಸಲು ಪ್ರತಿಕೃತಿ ಮತ್ತು ಉದ್ಯಾನ ನಿರ್ಮಿಸಲಾಗಿದೆ. ದೀಪಗಳು ಮತ್ತು ಸಂಗೀತ ಕಾರ್ಯಕ್ರಮಗಳ ಜತೆಗೆ ಜೀವನ ಗಾತ್ರದ ಮಾದರಿಗಳನ್ನು ಮತ್ತು ಭಿತ್ತಿಚಿತ್ರಗಳನ್ನು ಹೊಂದಿದೆ.
ಹೈಟೆಕ್ ಧ್ವನಿ ಮತ್ತು ಬೆಳಕಿನ ಮೂಲಕ ಶಿವಾಜಿ ಮಹಾರಾರ ಬಾಲ್ಯದ ಹೋರಾಟಗಳು, ಸಾಹಸಗಳು, ಆಡಳಿತ ವ್ಯವಸ್ಥೆ, ವೈರಿಗಳ ವಿರುದ್ಧ ಹೋರಾಟ ತಿಳಿದುಕೊಳ್ಳಬಹುದು.
ಛತ್ರಪತಿ ಶಿವಾಜಿ ಮಹಾರಾಜ ಹೋರಾಟದ ಚಿತ್ರಣವನ್ನು ತಿಳಿಸುವ ಶಿವಸೃಷ್ಟಿ ಯೋಜನೆಯ ಧ್ವನಿ ಮತ್ತು ಬೆಳಕಿನ ರೆಕಾರ್ಡಿಂಗ್ ಪೂರ್ಣಗೊಂಡಿದೆ. ಇದು ಶಾಶ್ವತ ಪ್ರದರ್ಶನವಾಗಿರುತ್ತದೆ. ಇದು ಅವರ
ಸಾಮ್ರಾಜ್ಯದ ಕೋಟೆಗಳ ಪ್ರತಿಕೃತಿಗಳ ಸಹ ಹೊಂದಿರುತ್ತದೆ. ಭಾರತೀಯ ಸ್ಮಾರಕಗಳಲ್ಲಿ ಕೋಟೆಗಳು ಮತ್ತು ಅರಮನೆಗಳು ಅತ್ಯಂತ ಆಕರ್ಷಕ ಆಗಿರುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಲಿದೆ.