ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೋಲಾರದಲ್ಲಿ ಜೆಡಿಎಸ್ ಪ್ರತಿಭಟನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ, ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು, ಹಾಲಿ ಕೇಂದ್ರ ಸಚಿವರ ವಿರುದ್ದ ಅವಹೇಳನ ಪದಬಳಕೆ ಮಾಡಿರುವುದು ಖಂಡನೀಯ, ಸರ್ಕಾರಿ ಅಧಿಕಾರಿಗಳಿಗೆ ತಮ್ಮದೇ ಆದ ಪ್ರೋಟೋಕಾಲ್ ಇರುತ್ತದೆ. ಆದರೆ ತನ್ನ ಪ್ರೋಟೋಕಾಲ್ ಮೀರಿ ಕೇಂದ್ರ ಸಚಿವರ ವಿರುದ್ದ ಅವಹೇಳನ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಸ್.ಐ.ಟಿ ಎಡಿಜಿಪಿ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೋಲಾರ ಜಿಲ್ಲಾ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ಸಂಜೆ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರಿಗಳಿಗೆ ಅವರದೇ ಪ್ರೊಟೋಕಾಲ್ ಇರುತ್ತದೆ. ಆದರೆ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ತಮ್ಮ ಪ್ರೋಟೊಕಾಲ್ ಬದಿಗೊತ್ತಿ, ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿ ಪದಬಳಕೆ ಬಳಸಿ ಪ್ರಕಟಣೆ ಬಿಡುಗಡೆಗೊಳಿಸಿರುವುದನ್ನು ಖಂಡಿಸುತ್ತೇವೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ಎಸ್.ಐ.ಟಿ ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರ ಬಗ್ಗೆ ಬಳಸಿರುವ ವಾಕ್ಯವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಲ್ಲಿ ಬಹುತೇಕ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ, ಅಧಿಕಾರ ಯಾರಿಗೂ ಶಾಶ್ವತವಲ್ಲ ಆದರೆ ಕಾಂಗ್ರೆಸ್ ನಾಯಕರು ನೇರವಾಗಿ ಕುಮಾರಸ್ವಾಮಿಯವರ ವಿರುದ್ದ ಮಾತನಾಡದೆ, ಜನರ ತೆರಿಗೆ ಹಣದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳಿಂದ ಕುಮಾರಸ್ವಾಮಿಯವರ ವಿರುದ್ದ ಮಾತನಾಡಿಸುತ್ತಿರುವ ಅನುಮಾನ ಮೂಡುವಂತಿದೆ ಎಂದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬನಕನಹಳ್ಳಿ ನಟರಾಜ್ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ಆಂದ್ರ ಮೂಲದ ವ್ಯಕ್ತಿಯಾಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರ ಮಾಡಿದ್ದು, ಅವರ ಇಲಾಖೆಯ ಅಧಿಕಾರಿಗಳು ಆತನ ವಿರುದ್ದವೇ ದೂರು ನೀಡಿ, ಕಾನೂನು ಹೋರಾಟ ಮಾಡಿದ್ದಾರೆ. ಅಂತಹ ಭ್ರಷ್ಟ ಅಧಿಕಾರಿಯ ಪರವಾಗಿ ಕಾಂಗ್ರೆಸ್ ನಾಯಕರು ಮಾತನಾಡಿಸುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಕಾಂಗ್ರೆಸ್ ನವರೇ ಎದುರಿಸಬೇಕಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ಡಾ.ರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಕಡಗಟ್ಟೂರು ದಯಾನಂದ್, ಸುಧಾಕರ್, ಎಪಿಎಂಸಿ ಪುಟ್ಟರಾಜು ಮುಂತಾದವರಿದ್ದರು.

ಚಿತ್ರ ೩೦ ಕೆ.ಎಲ್.ಆರ್. ೦೪ : ಕೇಂದ್ರ ಸಚಿವ ಕುಮಾರ ಸ್ವಾಮಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವಹೇಳನಾ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕೋಲಾರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿದರು. ಜಿಡಿಎಸ್ ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಬಣಕನಹಳ್ಳಿ ನಟರಾಜ್, ಡಾ.ರಮೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net