ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಕೀಯ ದುರ್ಲಾಭಕ್ಕೆ ಕಾಂಗ್ರೆಸ್ ಹವಣಿಕೆ: ಸಿ.ಟಿ.ರವಿ ಆರೋಪ

IMG_20240511_124907
Published on

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಎರಡು ಮಗ್ಗಲುಗಳಿವೆ. ಒಂದು ಅಶ್ಲೀಲ ವಿಡಿಯೋ, ಮತ್ತೊಂದು ಕನಿಷ್ಠ ಸಂವೇದನೆ ಇಲ್ಲದ, ಮಹಿಳೆಯರ ಗೌರವ ಕಾಪಾಡದ‌ ವಿಚಾರ. ಈ ಪ್ರಕರಣದಲ್ಲಿ ರಾಜಕೀಯ ದುರ್ಲಾಭ ಪಡೆಯಲು ಕಾಂಗ್ರೆಸ್ ಹವಣಿಸಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಯಾರು ಲಾಭ ಪಡೆಯಲು‌ ಮುಂದಾಗಿದ್ದಾರೆ ಎನ್ನುವುದು ಮುಂದೆ ಗೊತ್ತಾಗಲಿದೆ. ಇದನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇವರಾಜೇಗೌಡ ಆಡಿಯೋ ಬಿಡುಗಡೆ ಮಾಡಿದ ನಂತರ ಬಂಧನವಾಗಿದೆ. ಎರಡನೇ ಆಡಿಯೋ ಬಾಂಬ್ ಹೊರ ಬಂದ ಬಳಿಕ ಈ ಕ್ರಮವಾಗಿದೆ. ಇನ್ನಷ್ಟು ಆಡಿಯೋಗಳು ಅವರಿಂದ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಈ ಬಂಧನ ಆಗಿರಬಹುದು ಎಂದು ಸಿ.ಟಿ.ರವಿ ಶಂಕಿಸಿದರು.

ನ್ಯಾಯಾಂಗ ತನಿಖೆಯಾಗಲಿ

ಅಶ್ಲೀಲ ವಿಡಿಯೋ ಹಂಚಿಕೆಗೆ ಸಂಬಂಧಿಸಿದಂತೆ ಪೂರ್ಣ ಆಡಿಯೋ ಬಿಟ್ಟರೆ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ದೇವರಾಜೇಗೌಡ ಹೇಳಿದ್ದರು. ಹೀಗಾಗಿ ಸರ್ಕಾರದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಯಾರು ವಿಡಿಯೋ ಬಿಟ್ಟಿದ್ದಾರೆಂಬ ಅನುಮಾನ ಇದೆಯೋ ಅವರೇ ತನಿಖೆ ನಿರ್ಧರಿಸಿದರೆ ಸತ್ಯ ಹೊರಗೆ ಬರುವುದಿಲ್ಲ. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಸಿ.ಟಿ.ರವಿ ಸವಾಲೆಸೆದರು.

ಪ್ರಜ್ವಲ್ ಪ್ರಕರಣದ ರಾಜಕೀಯ ಪರಿಣಾಮಗಳೇನು ಎಂದು ಗೊತ್ತಾಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಪರ ವಾತಾವರಣವಿತ್ತು. ಮಾತಾಡುವ ಮತದಾರರು ಮೋದಿ ಮೋದಿ ಅಂತಿದ್ದರು. ಮೌನವಾಗಿದ್ದ ಮತದಾರರು ಏನ್ ಮಾಡಿದಾರೆ, ಯಾರಿಗೆ ಮತ ಹಾಕಿದ್ದಾರೆ ಎನ್ನುವು ಫಲಿತಾಂಶ ನಂತರವೇ ಗೊತ್ತಾಗಲಿದೆ. ನಾವು ಹೆಚ್ಚು ಸ್ಥಾನ ಗಳಿಸಲಿದ್ದೇವೆ ಎಂಬ ವಿಶ್ವಾಸವನ್ನು ಸಿ.ಟಿ.ರವಿ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net