

ಕೊಪ್ಪ: ಪಟ್ಟಣಕ್ಕೆ ಕುಡಿಯುವ ನಿರೋದಗಿಸುವ ಹುಚ್ಚುರಾಯರ ಕೆರೆಯ (ಹಿರೀಕೆರೆ) ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಲೇಔಟ್‌ಗೆ ದಾಖಲಿಸಿರುವ ಇ-ಸ್ವತ್ತು, ಖಾತೆಗಳನ್ನು ರದ್ದುಪಡಿಸಬೇಕು ಹಾಗೂ ಹೊಸದಾಗಿ ಇ-ಸ್ವತ್ತು ದಾಖಲಿಸಬಾರದು ಎಂದು ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಕೊಪ್ಪ ಗ್ರಾಮದ ಸರ್ವೇ ನ.156ರಲ್ಲಿ ನಿರ್ಮಾಣ ಹಂತದಲ್ಲಿರುವ ಖಾಸಗಿ ಲೇಔಟ್‌ನಿಂದ ಸಮೀಪದಲ್ಲಿರುವ ಹುಚ್ಚುರಾಯರ ಕೆರೆಗೆ ಕಲುಷಿತವಾದ ನೀರು ಬಂದು ಸೇರುವ ಆಪಾಯವಿದೆ. ಪಟ್ಟಣದ ನಾಗರಿಕರು ಇದೇ ಕೆರೆಯ ನೀರನ್ನು ಆಶ್ರಯಿಸಿದ್ದಾರೆ. ಕಲುಷಿತ ನೀರನ್ನು ಸೇವನೆ ಮಾಡಿದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹೀಗಾಗಿ ಲೇಔಟ್ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೊಪ್ಪ ಪಟ್ಟಣದ 1,300 ಜನರು ಸ್ವ ಸಹಿಯೊಂದಿಗೆ ಲೇಔಟ್ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿಗೆ ಮನವಿ ಮಾಡಿದ್ದರು. ಆ.29ರಂದು ನಡೆದ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಲೇಔಟ್ ನಿರ್ಮಾಣದಿಂದ ಕೆರೆಗೆ ಆಪಾಯವಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಸರ್ವ ಸದಸ್ಯರ ಅಭಿಪ್ರಾಯ ಲೇಔಟ್ ನಿರ್ಮಾಣದಿಂದ ಸಮಸ್ಯೆ ಎದುರಾಗುತ್ತದೆ ಎಂದು ಇದೆ. ಆದ್ದರಿಂದ ಇ-ಸ್ವತ್ತು, ಖಾತೆಗಳನ್ನು ದಾಖಲಿಸಬಾರರು, ದಾಖಲಿಸಲಾಗಿರುವ ಇ-ಸ್ವತ್ತುಗಳನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಇದಿನಬ್ಬ, ಸದ್ಯರಾದ ರೇಖಾ, ಹೇಮಾವತಿ, ಸುಜಾತಾ ಇದ್ದರು.