ಲಿಂಗಭೇದ ತೋರದೆ ಪ್ರತಿಭೆ ತೋರುವಂತಾಗಲು ಸಮಾನ ಅವಕಾಶಗಳನ್ನು ನೀಡಬೇಕು

29CBP2
Published on

ಚಿಕ್ಕಬಳ್ಳಾಪುರ: ಎಲ್ಲ ಕ್ಷೇತ್ರಗಳಲ್ಲೂ ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಸೂಕ್ತ ಅವಕಾಶಗಳು ಸಿಗಬೇಕೆಂಬ ಅಭಿಪ್ರಾಯಪಟ್ಟ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಲಿಂಗಭೇದ ತೋರದೇ ಪ್ರತಿಭೆ ತೋರುವಂತಾಗಲು ಸಮಾನ ಅವಕಾಶಗಳನ್ನು ನೀಡಬೇಕು ಎಂದು ಕರೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವು ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ನೀಡುತ್ತಿರುವುದನ್ನು ಸದ್ವಿನಿಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಸಾಧನೆ ತೋರಬೇಕೆಂದು ಸಲಹೆ ನೀಡಿದರು.

ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾದುದು, ಇದರಲ್ಲಿ ಎಲ್ಲರೂ ಸಮಾನರೇ ಎಂಬುದನ್ನು ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಜೀವನ ನಡೆಸಬೇಕು ಎಂದು ಜಿಪಂ ಸಿಇಒ ಪಿ.ಶಿವಶಂಕರ್ ಹೇಳಿದರು.

ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಲಿಂಗ ತಾರತಮ್ಯ, ಅಪೌಷ್ಟಿಕತೆ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿಗೆ ರಕ್ಷಣೆಯ ಅಗತ್ಯವಿದೆ. ಮನೆಯಲ್ಲೂ, ಕೆಲಸದ ಸ್ಥಳದಲ್ಲೂ ಮಹಿಳೆಯರು ದೌರ್ಜನ್ಯ ಮತ್ತು ಕಿರುಕುಳ ಅನುಭವಿಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ. ಇಂತಹ ಎಲ್ಲ ಸಂಕಷ್ಟಗಳನ್ನೂ ಮೀರಿ ಬೆಳೆಯಬೇಕೆಂಬ ಆತ್ಮಸ್ಥೈರ್ಯ ತುಂಬಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿರುವುದು ಹೆಮ್ಮೆಯ ವಿಚಾರ. ಈಗಲಾದರೂ ಅವರ ಬಗೆಗಿನ ಕೀಳರಿಮೆಯನ್ನು ಬಿಡಬೇಕೆಂದು ಜಿಪಂ ಉಪಾಧ್ಯಕ್ಷೆ ಸರಸ್ವತಮ್ಮ ಮನವಿ ಮಾಡಿದರು.

ಹೆಣ್ಣುಮಕ್ಕಳ ರಕ್ಷಣೆಯ ಮಹತ್ವ, ಕಾನೂನು ನೆರವು, ಮಹಿಳಾ ಸಬಲೀಕರಣಕ್ಕೆ ವಿವಿಧ ಇಲಾಖೆಗಳ ಸವಲತ್ತುಗಳ ಸಂಬಂಧಿಸಿದ ಭಿತ್ತಿಪತ್ರಗಳು, ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್. ಕಬಾಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮತ್ತಿತರರು ಇದ್ದರು.

ಮಕ್ಕಳಿಗೆ ಪ್ರಶಸ್ತಿ: ನಾವೀನ್ಯತೆ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲಗುರ್ಕಿಯ ಡಿ.ಅಶ್ವಿತಾ(10ನೇ ತರಗತಿ), ಬಾಗೇಪಲ್ಲಿಯ ವಿಶ್ವಾಸ (7ನೇ ತರಗತಿ), ತಾರ್ಕಿಕ ಕ್ಷೇತ್ರದಲ್ಲಿ ಪಿ.ಮುತ್ತಕ್ಕ (9ನೇ ತರಗತಿ), ಚಿಂತಾಮಣಿಯ ಎನ್.ಬಿ.ಕೀರ್ತಿ (9ನೇ ತರಗತಿ), ಕ್ರೀಡಾ ಕ್ಷೇತ್ರದಲ್ಲಿ ಗೊಳ್ಳುಚಿನ್ನಪ್ಪನಹಳ್ಳಿಯ ಜಿ.ರಜನಿ (9ನೇ ತರಗತಿ), ಜಯಂತಿ ಗ್ರಾಮದ ಯಶಸ್ವಿನಿ (8ನೇ ತರಗತಿ), ಸಾಂಸ್ಕೃತಿಕ ಕ್ಷೇತ್ರದಲ್ಲಿ ಗೌರಿಬಿದನೂರಿನ ಜೆ.ಭೂಮಿಕಾ(6ನೇ ತರಗತಿ), ಸಿ.ಎ.ಸೃಷ್ಟಿ (5ನೇ ತರಗತಿ), ಶಿಕ್ಷಣ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಜಿ.ಎಸ್.ಚರಿತಾ (ಪ್ರಥಮ ಪಿಯುಸಿ), ಚಿಕ್ಕಬಳ್ಳಾಪುರ ಬಾಲಕಿಯರ ಬಾಲಮಂದಿರದ ಅರ್ಬೀನ್ ಬಾನು ಸೇರಿ ಜಿಲ್ಲೆಯ 10 ಹೆಣ್ಣುಮಕ್ಕಳಿಗೆ 2021ನೇ ಸಾಲಿನ ಜಿಲ್ಲಾಮಟ್ಟದ ಅಸಾಧಾರಣ ಮಕ್ಕಳ ಪ್ರಶಸ್ತಿ ನೀಡಿ ಗೌರವಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net