ಲಾರಿಗೆ ಇನ್ನೋವಾ ಡಿಕ್ಕಿಯಾಗಿ ಸ್ಥಳದಲ್ಲೇ ಐವರ ದುರ್ಮರಣ

Accident
Published on

ಚಿತ್ರದುರ್ಗ: ನಗರದ ಹೊರವಲಯದ ತಮಟಕಲ್ಲು ಓವರ್‌ಬ್ರಿಡ್ಜ್ ರಾಷ್ಟ್ರೀಯ ಹೆದ್ದಾರಿ 48 ರ ಮಾರ್ಗದಲ್ಲಿ ಭಾನುವಾರ ಎಡಬದಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಇನ್ನೋವಾ ಕಾರು ಡಿಕ್ಕಿಯಾಗಿ, ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮೃತರನ್ನು ಬೆಂಗಳೂರು ಮೂಲದ ಮಲ್ಲಿಕಾರ್ಜುನ (70), ಎನ್.ಎಸ್.ರುದ್ರಸ್ವಾಮಿ (69), ಚಂದ್ರಹಾಸ್ (67), ಶಾಂತಮೂರ್ತಿ, ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಇಬ್ಬರ ವಯಸ್ಸು ತಿಳಿದುಬಂದಿಲ್ಲ. ತೀವ್ರವಾಗಿ ಗಾಯಗೊಂಡಿರುವ ಚಿದಂಬರಾಚಾರ್ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದ ಆರೂ ಮಂದಿ ಬಾದಾಮಿ ಬನಶಂಕರಿ, ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಿ, ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು. ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದರ್ಶನ ನಂತರ ತಮ್ಮೂರಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಆರು ಮಂದಿಯಲ್ಲಿ ಕೆಲವರು ನಿವೃತ್ತ ನೌಕರರಾಗಿದ್ದು, ಸ್ನೇಹಿತರೆಲ್ಲ ಸೇರಿ ಸ್ವಂತ ಉದ್ದಿಮೆ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಇದರಲ್ಲಿ ಮಲ್ಲಿಕಾರ್ಜುನ ಎಂಬುವರು ಮೂಲತಃ ಹೊಸಕೋಟೆಯವರಾಗಿದ್ದು, ಅಲ್ಲಿನ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿದ್ದರು ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದ ಚಂದ್ರಹಾಸ ಕಾರು ಚಾಲನೆ ಮಾಡುತ್ತಿದ್ದರು. ಅಪಘಾತ ಸ್ಥಳದ ಎಡಬದಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ, ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾದ ರಭಸಕ್ಕೆ ನುಜ್ಜುಗುಜ್ಜಾಗಿದೆ. ಘಟನೆ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಮೃತರ ಸಂಬಂಧಿಕರು ಆಗಮಿಸಿದ್ದು, ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಆಕ್ರಂದನ ಮುಗಿಲುಮುಟ್ಟಿದೆ. ಹಲವರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ನನ್ನ ತಂದೆ ರುದ್ರಸ್ವಾಮಿ ಅವರು ಭಾನುವಾರ ಬೆಳಗ್ಗೆ ಕರೆ ಮಾಡಿ ಕೊಪ್ಪಳ ಗವಿಸಿದ್ದೇಶ್ವರ ಮಠ, ಇತರೆಡೆಗಳಲ್ಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿರುವುದಾಗಿ ಹೇಳಿದ್ದರು. ಮಧ್ಯಾಹ್ನ ಸುಮಾರು 12.15ಕ್ಕೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರದ ಹಾಲೇಶ್ ಎಂಬುವರು ಕರೆ ಮಾಡಿ ಅಪಘಾತವಾಗಿರುವ ಮಾಹಿತಿ ತಿಳಿಸಿದರು ಎಂದು ರುದ್ರಸ್ವಾಮಿ ಅವರ ಪುತ್ರ ಪ್ರಸನ್ನಕುಮಾರ್ ತಿಳಿಸಿದರು.

ಅಪಘಾತಕ್ಕೆ ಕಾರಣವಾದ ಚಾಲಕ, ಹೆದ್ದಾರಿ ಬಳಿ ಲಾರಿ ನಿಲ್ಲಿಸಿ ಹೋದ ಚಾಲಕನ ವಿರುದ್ಧ ಕಾನೂನು ಕ್ರಮವಹಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿ ದಿನಕರ್, ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net