

ತಿ.ನರಸೀಪುರ: ತಲಕಾಡು-ವಡಯಾಂಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 6,37,463 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟದ ಹಿರಿಯ ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್ ತಿಳಿಸಿದರು.
ತಲಕಾಡಿನ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 1992-93ರಲ್ಲಿ ಆರಂಭವಾದ ಸಹಕಾರ ಸಂಘವು 32 ವರ್ಷಗಳಷ್ಟು ಹಳೆಯ ಸಂಘವಾಗಿದ್ದು, ಆರಂಭದಿಂದಲೂ ಲಾಭದಾಯಕವಾಗಿ ಮುನ್ನಡೆಯತ್ತಾ ಬಂದಿದೆ. ಸಂಘದಲ್ಲಿ ನಿತ್ಯ 1500 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಹಾಲು ಉತ್ಪಾದನೆಗೆ ರೈತರು ಒತ್ತು ನೀಡಬೇಕಿದೆ ಎಂದರು.
ಇತ್ತೀಚೆಗೆ ಹೈನುಗಾರಿಕೆ ಲಾಭದಾಯಕ ಉದ್ದಿಮೆಯಾಗಿ ಬೆಳೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಸು ಸಾಕುವವರ ಸಂಖ್ಯೆ ಇಳಿಮುಖವಾಗುತ್ತಿರುವುದು ಬೇಸರದ ಸಂಗತಿಯಾಗಿದೆ, ಮನೆಗೆ ಒಂದು ಅಥವಾ ಎರಡು ಹಸು ಇದ್ದರೆ ಹೆಚ್ಚಿನ ಹಾಲು ಉತ್ಪಾದನೆ ಸಾಧ್ಯವಾಗುತ್ತದೆ ಎಂದರು.
2022-23ನೇ ಸಾಲಿನಲ್ಲಿ ಸಹಕಾರ ಸಂಘವು ರೈತರಿಂದ 1,65,763 ರೂ.ಗಳ ಹಾಲನ್ನು ಖರೀದಿಸಿ ರೈತರಿಗೆ ಹಣ ಬಟವಾಡೆ ಮಾಡಿದೆ. ರೈತರಿಂದ ಖರೀದಿ ಮಾಡಿದ ಹಾಲನ್ನು 1,30,31,264 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಸ್ಥಳೀಯವಾಗಿ ಮಾರಾಟ ಮಾಡಿದ ಹಾಲಿನ 18,34,723 ರೂ.ಗಳನ್ನು ಸಂಘದ ಲೆಕ್ಕಕ್ಕೆ ಜಮಾ ಮಾಡಲಾಗಿದೆ, ಸಂಘಕ್ಕೆ ಬಂದಿರುವ ನಿವ್ವಳ ಲಾಭದ ಪೈಕಿ 3,03,398 ರೂ.ಗಳನ್ನು ರೈತರಿಗೆ ಬೋನಸ್ ರೂಪದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಟಿ.ಆರ್.ನರೇಂದ್ರ ಮಾತನಾಡಿ, ರೈತರು ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು, ತಾವೂ ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಕೆ.ಎನ್.ಶ್ರುತಿ ಮಾತನಾಡಿದರು.
ಇದೇ ವೇಳೆ ಸಂಘಕ್ಕೆ 15,797 ಲೀಟರ್ ಹಾಲು ಸರಬರಾಜು ಮಾಡಿದ ಶಿವಬಸಪ್ಪ, 10,853 ಲೀಟರ್ ಸರಬರಾಜು ಮಾಡಿದ ಆರ್.ಮಹೇಂದ್ರ ಹಾಗೂ 9721 ಲೀಟರ್ ಸರಬರಾಜು ಮಾಡಿದ ಹೂವಯ್ಯ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ವಿ.ಎಸ್.ಗಣೇಶ್, ನಿರ್ದೇಶಕರಾದ ಟಿ.ಆರ್.ರಂಗರಾಮು, ಎಂ.ಮಹದೇವು, ಟಿ.ವಿ.ಕೃಷ್ಣೇಗೌಡ, ಟಿ.ವಿ.ವೆಂಕಟೇಶ್, ಟಿ.ಸಿ.ಮಹದೇವ, ಬಸವಣ್ಣ(ಬಂಗಾರು), ಹೂವಯ್ಯ, ರತ್ನಮ್ಮ, ಕಮಲಮ್ಮ, ಕಾರ್ಯ ನಿರ್ವಹಣಾಧಿಕಾರಿ ಟಿ.ಪಿ.ಕೃಷ್ಣ, ಪರಮೇಶ, ಜಿ.ಮಹೇಶ್ ಮತ್ತಿತರರಿದ್ದರು.