ಲಾಟರಿ ವ್ಯವಸ್ಥೆ ಕೈಬಿಡಿ

29HDK4
Published on

ಎಚ್.ಡಿ.ಕೋಟೆ: ಒತ್ತುವರಿಯಾಗಿರುವ ಸರ್ಕಾರಿ ಜಮೀನು ತೆರವುಗೊಳಿಸಿ, ಕೃಷಿ ಇಲಾಖೆಯಿಂದ ರೈತರಿಗೆ ಪರಿಕರಗಳನ್ನು ನೀಡಿ, ಲಾಟರಿ ವ್ಯವಸ್ಥೆ ಕೈಬಿಡಿ, ಮಳೆ ಹಾನಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಿ…
ಇವು ಗುರುವಾರ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ರತ್ನಾಂಬಿಕಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತ ಸಂಪರ್ಕ ಸಭೆಯಲ್ಲಿ ರೈತರು, ರೈತಸಂಘದ ಮುಖಂಡರಿಂದ ಕೇಳಿಬಂದ ಒತ್ತಾಯಗಳು.


ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರಗಳನ್ನು ರೈತರಿಗೆ ನೀಡಲು ಲಾಟರಿ ಪದ್ಧತಿ ಇದ್ದು, ಇದರಿಂದ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಅನನುಕೂಲವಾಗಲಿದೆ. ಈ ವ್ಯವಸ್ಥೆ ರದ್ದು ಮಾಡಿ ಮೊದಲು ಅರ್ಜಿ ಸಲ್ಲಿಸಿದ ಆಧಾರದ ಮೇಲೆ ಫಲಾನುಭವಿ ಆಯ್ಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ರಂಗಸ್ವಾಮಿ ಟಾರ್ಪಾಲ್ ವಿತರಣೆ ಮಾಡುವಾಗ ಮಾತ್ರ ಸ್ವಲ್ಪ ಸಮಸ್ಯೆ ಆಗುತ್ತಿತ್ತು ಎಂಬ ಕಾರಣಕ್ಕೆ ಲಾಟರಿ ಪದ್ಧತಿ ಮಾಡಲಾಗುತ್ತಿತ್ತು. ಮುಂದಿನ ವರ್ಷದಿಂದ ಲಾಟರಿ ಪದ್ಧತಿ ರದ್ದು ಮಾಡುವುದಾಗಿ ಭರವಸೆ ನೀಡಿದರು.


ರೈತ ಬೋರೇಗೌಡ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ದರಪಟ್ಟಿಗಿಂತ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಅಂಗಡಿ ಮಾಲೀಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.


ನಂತರ ಮಾತನಾಡಿದ ಕೃಷಿ ಅಧಿಕಾರಿ ರಂಗಸ್ವಾಮಿ ನೀವು ದೂರು ನೀಡಿದ ನಂತರ ಅಂಗಡಿಗೆ ಭೇಟಿ ನೀಡಿ ಮಾಲೀಕರನ್ನು ಪ್ರಶ್ನೆ ಮಾಡಿದಾಗ ನಾವು ದರಕ್ಕಿಂತ ಹೆಚ್ಚು ಹಣ ಪಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ನೀವು ಲಿಖಿತವಾಗಿ ದೂರು ನೀಡಿದರೆ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗವುದು ಎಂದರು.
ರೈತ ರವಿಕುಮಾರ್ ಮಾತನಾಡಿ, ತಾರಕ ಏತ ನೀರಾವರಿ ಕಾಲುವೆಗಳು ಮುಚ್ಚಿ ಹೋಗುತ್ತಿದ್ದು ಗಿಡಗಂಟಿಗಳು ಬೆಳೆದಿವೆ. ಇದರಿಂದ ನೀರು ಸರಾಗವಾಗಿ ಹರಿಯದೆ ಕೊನೆ ಭಾಗದವರಿಗೆ ನೀರು ಸಿಗುತ್ತಿಲ್ಲ. ನಾಲೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸುವಂತೆ ಕಳೆದ ರೈತ ಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಿದರೂ ಯಾವುದೇ ಕ್ರಮವಹಿಸಿಲ್ಲ. ಇದರಿಂದ ರೈತರಿಗೆ ಅನನುಕೂಲವಾಗಿದೆ ಎಂದು ಸಭೆಗೆ ತಿಳಿಸಿದರು.


ತಾರಕ ನೀರಾವರಿ ಇಲಾಖೆ ಇಂಜಿನಿಯರ್ ರತೀಶ್ ಮಾತನಾಡಿ, ನಾಲೆಯಲ್ಲಿ ಗಿಡ ಗಂಟಿಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಒತ್ತುವರಿ ತೆರವಿಗೆ ಸರ್ವೇ ಮಾಡಬೇಕು. ನಮ್ಮ ಇಲಾಖೆಯಲ್ಲಿ ಸರ್ವೇಯರ್ ಇಲ್ಲ. ಹಾಗಾಗಿ ಕಂದಾಯ ಇಲಾಖೆಗೆ ಪತ್ರ ಬರೆದು ಸರ್ವೇ ಮಾಡಿಸಿ ಒತ್ತುವರಿ ತೆರವು ಮಾಡಲಾಗುವುದು ಹೇಳಿದರು.
ಬೆಟ್ಟದಬೀಡು ಗ್ರಾಮದಲ್ಲಿ ಜಮೀನಿಗೆ ತೆರಳಲು ಓಣಿ ಬಿಡಿಸುವಂತೆ ಮೂರು ತಿಂಗಳ ಹಿಂದೆ ಅರ್ಜಿ ನೀಡಿದ್ದರು ಕೂಡ ನ್ಯಾಯಾಲಯದಲ್ಲಿ ಪ್ರಕರಣ ಇದೇ ಎಂಬ ಕಾರಣ ನೀಡಿ ಸರ್ವೇಯರ್‌ಗಳು ಓಣಿ ಬಿಡಿಸಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮಹಾದೇವನಾಯಕ ಸಭೆಯ ಗಮನಕ್ಕೆ ತಂದರು.

ಸರ್ಕಾರಿ ಓಣಿ ತೆರವುಗೊಳಿಸಲು ಯಾವುದೇ ಕಾರಣ ಬೇಕಿಲ್ಲ. ಯಾರಾದರೂ ನ್ಯಾಯಾಲಯಕ್ಕೆ ಹೋಗಿದ್ದರೆ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಓಣಿ ತೆರವುಗೊಳಿಸಲು ಕ್ರಮ ವಹಿಸಿ ಎಂದು ತಹಸೀಲ್ದಾರ್ ರತ್ನಾಂಬಿಕಾ ಸರ್ವೇ ಮೇಲ್ವಿಚಾರಕ ಜಗನ್ನಾಥ್‌ಗೆ ಸೂಚಿಸಿದರು.

ಮೂಲ ಸ್ಥಾನಕ್ಕೆ ಕಳುಹಿಸಿ
ಶಿರಮಹಳ್ಳಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಗೃಹದ ನೀರು ನಾಲೆಗೆ ಹರಿದು ಬರುತ್ತಿದ್ದು ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮ ವಹಿಸಬೇಕು ಎಂದು ರವಿಕುಮಾರ್ ಸಭೆಯ ಗಮನಕ್ಕೆ ತಂದರು.

ಕುಮಾರಸ್ವಾಮಿ ಮಾತನಾಡಿ ತಾಲೂಕಿನ ಬಹುತೇಕ ಗ್ರಾಮ ಸಹಾಯಕರು ಗ್ರಾಮಗಳಲ್ಲಿ ಕೆಲಸ ಮಾಡದೆ ತಹಸೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಮೂಲ ಸ್ಥಾನಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ತಿಂಗಳು 6 ಜನ ಗ್ರಾಮಲೆಕ್ಕಿಗರು ಹೊಸದಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು ಅವರು ಬಂದ ನಂತರ ರೆಕಾರ್ಡ್ ರೂಂಗೆ ನಿಯೋಜಿಸಿ ಅಲ್ಲಿ ಕೆಲಸ ಮಾಡುವ ಗ್ರಾಮ ಸಹಾಯಕರನ್ನು ಮೂಲ ಸ್ಥಾನಕ್ಕೆ ಕಳುಹಿಸಲು ಕ್ರಮ ವಹಿಸಲಾಗುತ್ತದೆ ಎಂದು ತಹಸೀಲ್ದಾರ್ ಭರವಸೆ ನೀಡಿದರು.

ಮಟಕೆರೆ ಕೃಷ್ಣ ಮಾತನಾಡಿ, ಉಪಾ ನೋಂದಣಿ ಕಚೇರಿ ಕಟ್ಟಡವು ಖಾಸಗಿ ಕಟ್ಟಡದಲ್ಲಿದ್ದು, ಎರಡನೇ ಅಂತಸ್ತಿನಲ್ಲಿದೆ. ಹಾಗಾಗಿ, ವೃದ್ಧರು, ಅಂಗವಿಕಲರು ಕಚೇರಿಗೆ ತೆರಳಲು ಸಮಸ್ಯೆಯಾಗುತ್ತಿದೆ. ಉಪನೋಂದಣಿ ಕಚೇರಿಯನ್ನು ತಾಲೂಕು ಆಡಳಿತಸೌಧದ ನೆಲ ಮಹಡಿಗೆ ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ನಂತರ ಮಾತನಾಡಿದ ತಹಸೀಲ್ದಾರ್ ರತ್ನಾಂಬಿಕಾ ಜಾಗ ಪರಿಶೀಲನೆ ಮಾಡಿ ಕ್ರಮವಹಿಸುವ ಭರವಸೆ ನೀಡಿದರು.

ಸಭೆ ಪ್ರಾರಂಭಕ್ಕೂ ಮುನ್ನ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬಾರದೆ ತಮ್ಮ ಅಧೀನ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದರಿಂದ ಕೋಪಗೊಂಡ ರೈತರು, ರೈತರ ಸಭೆ ಎಂದರೆ ಅಧಿಕಾರಿಗಳಿಗೆ ತಾತ್ಸಾರ. ನಾವು ಬೆಳೆದ ಅನ್ನ ಬೇಕು, ಆದರೆ ರೈತರ ಸಭೆ ಇವರಿಗೆ ಬೇಡ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರುವವರೆಗೆ ಸಭೆ ಮಾಡುವುದು ಬೇಡ ಎಂದು ಸಭೆ ಬಹಿಷ್ಕರಿಸಲು ಮುಂದಾದರು. ತಹಸೀಲ್ದಾರ್ ರತ್ನಾಂಬಿಕಾ ರೈತರನ್ನು ಸಂತೈಸಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಭೆಗೆ ಬರುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಹಾಜರಾದ ನಂತರ ಸಭೆ ಪ್ರಾರಂಭವಾಯಿತು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ರೈತ ಸಂಘದ ನಗರ ಅಧ್ಯಕ್ಷ ಪ್ರಸಾದಿ, ಶಿವಲಿಂಗಪ್ಪ, ಪುಟ್ಟಣ್ಣ, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net