

ಮಾಸ್ಕೊ/ಲವಿವ್: ಯೂಕ್ರೇನ್ ಮೇಲೆ ರಷ್ಯಾ ದಾಳಿ ಶುಕ್ರವಾರವೂ ಮುಂದುವರಿದಿದೆ. ರಾಜಧಾನಿ ಕಿಯೆವ್ ಮತ್ತು ಪಶ್ಚಿಮದ ನಗರ ಲವಿವ್ ಮೇಲೆ ಬಾಂಬ್ ಮತ್ತು ಶೆಲ್ ದಾಳಿಯನ್ನು ರಷ್ಯಾ ಪಡೆ ತೀವ್ರಗೊಳಿಸಿದೆ. ನಾಗರಿಕರನ್ನೇ ಗುರಿಯಾಗಿಸಿ ಶಾಲೆ, ಆಸ್ಪತ್ರೆ ಮತ್ತು ವಸತಿ ಪ್ರದೇಶಗಳ ಮೇಲೆ ಪದೇಪದೆ ದಾಳಿ ನಡೆದಿದೆ.
ಲವಿವ್ನ ಹೊರವಲಯದಲ್ಲಿ ಶುಕ್ರವಾರ ನಸುಕಿನ ವೇಳೆ ಕ್ಷಿಪಣಿ ದಾಳಿ ನಡೆದಿತ್ತು. ರಷ್ಯಾ ಸೇನೆಯ ಕಣ್ತಪ್ಪಿಸಿ ಜೀವ ಉಳಿಸಿಕೊಳ್ಳಲು ಜನ ಈ ಪ್ರದೇಶವನ್ನು ಬಳಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಇದೇ ದಾರಿಯ ಮೂಲಕ ಪಟ್ಟಣಕ್ಕೆ ಆಹಾರ ಮತ್ತು ಇತರೆ ನೆರವು, ಪರಿಹಾರ ಸಾಮಗ್ರಿಗಳು ರವಾನೆಯಾಗುತ್ತಿದ್ದವು. ಲವಿವ್ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿದ್ದ ಸೇನಾ ವಿಮಾನ ದುರಸ್ತಿ ಕೇಂದ್ರ ನಾಶವಾಗಿದೆ ಎಂದು ಪ್ರಾದೇಶಿಕ ಗವರ್ನರ್ ಮಕ್ಸಿಮ್ ಕೋಝಿಟ್ಸ್ಕಿ ಹೇಳಿದರು.
ರಷ್ಯಾ ಸೇನೆಯ ಕ್ಷಿಪಣಿ ಕಪು್ಪ ಸಮುದ್ರ ಭಾಗದಿಂದ ಬಂದಿದ್ದು, ಆರು ಕ್ಷಿಪಣಿಗಳ ಪೈಕಿ ಎರಡನ್ನು ಹೊಡೆದುರುಳಿಸಲಾಗಿದೆ. ಲವಿವ್ ಪಟ್ಟಣ ಪೋಲೆಂಡ್ ಗಡಿಗೆ ಸಮೀಪದಲ್ಲೇ ಇದ್ದು, ಸುತ್ತಮುತ್ತಲಿನ ಪ್ರದೇಶ ರಷ್ಯಾ ದಾಳಿಗೆ ತತ್ತರಿಸಿದೆ. ಲವಿವ್ನಲ್ಲಿ 2 ಲಕ್ಷ ಜನರಿದ್ದು, ದಾಳಿ ಪೀಡಿತ ಪ್ರದೇಶದಿಂದ ರಕ್ಷಣೆಗಾಗಿ ಇಲ್ಲಿ ಬಂದು ಸೇರಿದ್ದರು ಎಂದು ಯೂಕ್ರೇನ್ ವಾಯುಪಡೆ ತಿಳಿಸಿದೆ.
ಆಸ್ಪತ್ರೆಗಳ ಮೇಲೆ 43 ದಾಳಿ: ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ) ಮಾಹಿತಿ ಪ್ರಕಾರ, ರಷ್ಯಾ ಇದುವರೆಗೆ ಯೂಕ್ರೇನ್ನಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ಸೌಕರ್ಯಗಳ ಮೇಲೆ 43 ದಾಳಿ ನಡೆಸಿದೆ. ಇದರಲ್ಲಿ 12 ಜನ ಮೃತಪಟ್ಟಿದ್ದು, 34 ಜನ ಗಾಯಗೊಂಡಿದ್ದಾರೆ.
ಮಾನವೀಯ ನೆರವು ಹೆಚ್ಚಳ: ಯೂಕ್ರೇನ್ ಮೇಲೆ ರಷ್ಯಾ ಸಮರ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ನೆರವು ನೀಡುವ ಸಂಸ್ಥೆಗಳು ನಾಗರಿಕರ ಪರಿಹಾರ ಸಾಮಗ್ರಿ ತಲುಪಿಸುವ ಮತ್ತು ನೆರವು ಒದಗಿಸುವ ಕೆಲಸವನ್ನು ಹೆಚ್ಚಿಸಿವೆ. ಫೆ.24ರಿಂದೀಚೆಗೆ ಯೂಕ್ರೇನ್ನ 32 ಲಕ್ಷ ಜನ ನಿರಾಶ್ರಿತರಾಗಿದ್ದು, ವಿವಿಧೆಡೆ ಆಶ್ರಯ ಪಡೆದುಕೊಂಡಿದ್ದಾರೆ. ಯೂಕ್ರೇನ್ ಗಡಿಭಾಗದಲ್ಲಿ ಪೋಲೆಂಡ್ನ ಝೆಸ್ರೆೋವ್ ಮಾನವೀಯ ನೆರವು ಒದಗಿಸುವ ಕೇಂದ್ರಸ್ಥಾನವಾಗಿ ರೂಪುಗೊಂಡಿದೆ. ಇಲ್ಲಿ ಪರಿಹಾರ ಸಾಮಗ್ರಿಗಳ ದಾಸ್ತಾನು ತುಂಬಿದಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್ಎಚ್ಸಿಆರ್ನ ಬೃಹತ್ ಉಗ್ರಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇದೆ.
ಅನಿವಾಸಿ ರಷ್ಯನ್ನರ ಬೆಂಬಲ ಇಲ್ಲ: ಯೂಕ್ರೇನ್ ಮೇಲಿನ ದಾಳಿ ವಿಚಾರವಾಗಿ ಅನಿವಾಸಿ ರಷ್ಯನ್ನು ತಮ್ಮದೇ ನಿಲುವು ಹೊಂದಿದ್ದಾರೆ. ಅವರು ರಷ್ಯಾ ದಾಳಿಯನ್ನು ಸಮರ್ಥಿಸುವ ಕೆಲಸ ಮಾಡುತ್ತಿಲ್ಲ. ಬಹುತೇಕರು ಯುದ್ಧ ಬೇಡವಾಗಿತ್ತು ಎಂದೇ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಹಣಕಾಸಿನ ನೆರವು, ರಷ್ಯಾದಲ್ಲಿ ಹೂಡಿಕೆ ಹೆಚ್ಚಿಸುವುದಕ್ಕೂ ಹಿಂದೇಟು ಹಾಕಿದ್ದಾರೆ.
ಝೆಲೆನ್ಸ್ಕಿಗೆ ನೊಬೆಲ್ ಆಗ್ರಹ: ಯುರೋಪ್ ಒಕ್ಕೂಟದ ಅನೇಕ ರಾಜಕೀಯ ನೇತಾರರು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಗೆ 2022ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ನಾರ್ವೆಯ ನೊಬೆಲ್ ಸಮಿತಿಗೆ ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ಪುರಸ್ಕಾರದ ನಾಮ ನಿರ್ದೇಶನದ ಅವಧಿ ಯನ್ನು ಮಾರ್ಚ್ 31ರ ತನಕ ವಿಸ್ತರಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಮಾ.11ರಂದು ಈ ನಾಯಕರು ಈ ಸಂಬಂಧ ಸಮಿತಿಗೆ ಪತ್ರ ಬರೆದಿದ್ದರು. ಈ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆ ಅಕ್ಟೋಬರ್ 3-10ರ ನಡುವೆ ನಡೆಯಲಿದೆ. 2022ರ ಪುರಸ್ಕಾರಕ್ಕೆ 251 ಸಾಧಕರು ಮತ್ತು 92 ಸಂಘಟನೆಗಳು ಅರ್ಜಿ ಸಲ್ಲಿಸಿವೆ.
ನಟಿ ಒಕ್ಸಾನ ಶ್ವೆಟ್ಸ್ ದಾಳಿಗೆ ಬಲಿ: ಕಿಯೆವ್ನ ವಸತಿ ಕಟ್ಟಡದ ಮೇಲೆ ರಷ್ಯಾ ಸೇನೆ ನಡೆಸಿದ ರಾಕೆಟ್ ದಾಳಿಗೆ ಯೂಕ್ರೇನ್ ನಟಿ ಒಕ್ಸಾನ ಶ್ವೆಟ್ಸ್ ಬಲಿಯಾಗಿದ್ದಾರೆ. ಯಂಗ್ ಥಿಯೆಟರ್ ಟ್ರೂಪ್ ಈ ವಿಚಾರವನ್ನು ಖಾತರಿಪಡಿಸಿದ್ದು, ಸಂತಾಪ ಸೂಚಿಸಿದೆ. ಹಾಲಿವುಡ್ ರಿಪೋರ್ಟರ್ ವರದಿ ಪ್ರಕಾರ, ಒಕ್ಸಾನಾಗೆ 67 ವರ್ಷ ವಯಸ್ಸಾಗಿತ್ತು. ಯೂಕ್ರೇನ್ನಲ್ಲಿ ಅತಿ ಹೆಚ್ಚು ಮಾನ್ಯತೆ, ಗೌರವ ಪಡೆದ ನಟಿ ಆಗಿದ್ದರು.
ಅಣ್ವಸ್ತ್ರ ದಾಳಿ ಎಚ್ಚರಿಕೆ: ಯೂಕ್ರೇನ್ ವಿರುದ್ಧ ಗೆಲುವು ಪಡೆಯಲೇ ಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಅಣ್ವಸ್ತ್ರ ದಾಳಿ ನಡೆಸಬಹುದು. ಅಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಮೆರಿಕದ ರಕ್ಷಣಾ ಸಂಸ್ಥೆ ಎಚ್ಚರಿಸಿದೆ. ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬೆರ್ರಿಯೆರ್ ಅವರು ವಿಶ್ವವ್ಯಾಪಿ ಬೆದರಿಕೆ ವರದಿಯ 67ಪುಟಗಳ ಸಾರಾಂಶವನ್ನು ಬಿಡುಗಡೆ ಮಾಡಿ ಈ ವಿಚಾರ ತಿಳಿಸಿದರು. ರಷ್ಯಾದ ಬಳಿ 1,000ಕ್ಕೂ ಹೆಚ್ಚು ಅಣಸ್ತ್ರ ಸಿಡಿತಲೆಗಳಿವೆ ಎಂದು ಹೇಳಲಾಗುತ್ತಿದೆ.
ಅಮೆರಿಕದಿಂದ ಜೈವಿಕಾಸ್ತ್ರ ಅಭಿವೃದ್ಧಿ: ಕಿಯೆವ್ ಜತೆಗೂಡಿ ಅಮೆರಿಕ ಜೈವಿಕಾಸ್ತ್ರವನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ವಿಚಾರದ ಸ್ಥಿತಿಗತಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಬಹಿರಂಗಪಡಿಸಬೇಕು. ಜೈವಿಕಾಸ್ತ್ರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ನಮಗೆ ಸಿಕ್ಕಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಅದನ್ನು ಬಿಡುಗಡೆ ಮಾಡಿ ಅಮೆರಿಕವನ್ನು ಎಚ್ಚರಿಸಿದೆ.
ಬಿಕ್ಕಟ್ಟು ಸಹ್ಯವಲ್ಲ ಎಂದ ಭಾರತ: ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಭಾರತ ಮತ್ತೆ ಕಳವಳ ವ್ಯಕ್ತಪಡಿಸಿದೆ. ಮಾನವೀಯ ನೆಲೆಯ ಕ್ರಮಗಳನ್ನು ಅಲ್ಲಿ ತೆಗೆದುಕೊಳ್ಳಬೇಕು. ನಾಗರಿಕರ ಪ್ರಾಣ ಹಾನಿ ಆಗುತ್ತಿದೆ. ನಾಗರಿಕರ ಮೇಲಿನ ದಾಳಿ ಸಹ್ಯವಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಭಾರತ ಆಗ್ರಹಿಸಿದೆ.
ನೇರ ವಹಿವಾಟಿಗೆ ಇರಾನ್ ಒಲವು: ಭಾರತದ ಇಂಧನ ಅಗತ್ಯಗಳನ್ನು ಪೂರೈಸುವುದಕ್ಕೆ ನೇರ ವಹಿವಾಟು ನಡೆಸಲು ಇರಾನ್ ಸಿದ್ಧವಿರುವು ದಾಗಿ ಘೋಷಿಸಿದೆ. ಮೂರನೇಯವರ ಮಧ್ಯಸ್ಥಿಕೆ ಇಲ್ಲದ ವಹಿವಾಟು ಉಭಯ ದೇಶಗಳಿಗೆ ಒಳಿತು ಎಂದು ಇರಾನ್ ಮೂಲಗಳು ಹೇಳಿವೆ. ಇದೇ ವೇಳೆ, ರಷ್ಯಾದಿಂದ ಕಚ್ಚಾ ತೈಲವನ್ನು ಭಾರತ ನ್ಯಾಯಯುತ ವಾಗಿಯೇ ಖರೀದಿಸಿದೆ. ಇದನ್ನು ರಾಜಕೀಯಕ್ಕೆ ಬಳಸಬಾರದೆಂದು ರಷ್ಯಾದ ಮೂಲಗಳು ಆಗ್ರಹಿಸಿವೆ.
ಪುತಿನ್ ಟೀಕಾಕಾರ್ತಿ ಸಾವು: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಕಟು ಟೀಕಾಕಾರ್ತಿ ರಷ್ಯಾದ ಮಾಡೆಲ್ ಗ್ರೆಟಾ ವೆಡ್ಲೆರ್ (23) ಅಸಹಜ ವೆನಿಸುವ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈಕೆಯ ಮೃತದೇಹ ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಈಕೆಯ ಮಾಜಿ ಬಾಯ್ಫ್ರೆಂಡ್ ಡಿಮಿಟ್ರಿ ಕೊರೊವಿನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಬಿಕ್ಕಟ್ಟಿನಲ್ಲಿದೆ ರಷ್ಯಾ: ರಷ್ಯಾದ ನಗರಗಳ ಮೇಲೆ, ನಾಗರಿಕರ ಮೇಲೆ ರಾಕೆಟ್ ದಾಳಿಗಳಾಗುತ್ತಿಲ್ಲ. ಆದಾಗ್ಯೂ, ರಷ್ಯಾ ಬಿಕ್ಕಟ್ಟಿನಲ್ಲಿದೆ. ವಿವಿಧ ರಾಷ್ಟ್ರಗಳು ಹೇರಿದ ನಿರ್ಬಂಧಗಳು ರಷ್ಯನ್ನರ ನಿತ್ಯ ಬದುಕನ್ನು ತೀವ್ರವಾಗಿ ಬಾಧಿಸಿದೆ. ಯೂಕ್ರೇನ್ ಮೇಲಿನ ದಾಳಿಯನ್ನು ಸಮರ್ಥಿಸುವುದು ರಷ್ಯಾ ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ನ್ಯಾಟೋ ಪಡೆಯಿಂದ ದಾಳಿಯ ಬೆದರಿಕೆಯನ್ನೂ ಅದು ಎದುರಿಸುತ್ತಿದೆ. ಅನಿವಾಸಿ ರಷ್ಯನ್ನರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿಲ್ಲ.