ಲಡಾಖ್​ನಲ್ಲಿ ಚೀನಾ ಕ್ಯಾತೆ: ಸೇನೆಯಿಂದ ಮೂಲಸೌಕರ್ಯ ನಿರ್ಮಾಣ, ಅಮೆರಿಕ ಎಚ್ಚರಿಕೆ..

China
ಚೀನಾ ಕಾಮಗಾರಿಯ ಉಪಗ್ರಹ ಚಿತ್ರ
Published on

ವಾಷಿಂಗ್ಟನ್: ಪೂರ್ವ ಲಡಾಖ್​ನಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು, ಸರಹದ್ದಿನ ಆಯಕಟ್ಟಿನ ಸ್ಥಳಗಳಲ್ಲಿ ಮೂಲಸೌಕರ್ಯ ನಿರ್ಮಾಣ ಮುಂದುವರಿಸಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಎರಡು ವರ್ಷದ ಹಿಂದೆ ಗಲ್ವಾನ್ ಕಣಿವೆಯ ಘರ್ಷಣೆಯಿಂದ ಹಳಸಿರುವ ಭಾರತ-ಚೀನಾ ಸಂಬಂಧ ಸುಧಾರಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ಜಾರಿಯಲ್ಲಿರುವ ಹೊತ್ತಿನಲ್ಲೇ ಚೀನಾ, ಗಡಿಯಲ್ಲಿ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಇದು ವಿನಾಶಕಾರಿ ಮತ್ತು ಅಸ್ಥಿರಗೊಳಿಸುವ ವರ್ತನೆ ಎಂದು ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ. ಫ್ಲಿನ್ ಹೇಳಿದ್ದಾರೆ.

ಹಿಮಾಲಯ ಶ್ರೇಣಿಯ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಉದ್ದಕ್ಕೂ ಚೀನಾದ ಇಂಥ ಬೆಳವಣಿಗೆಯನ್ನು ಕಾಣಬಹುದು. ಚೀನಾದ ಪಶ್ಚಿಮ ಸೇನಾ ಥಿಯೇಟರ್​ನಲ್ಲಿ ಆಗುತ್ತಿರುವ ಈ ಬೆಳವಣಿಗೆಗಳು ಭಾರತದ ಕಣ್ಣು ತೆರಸಬೇಕು. ವಿವಾದಾತ್ಮಕ ಸ್ಥಳದಲ್ಲಿನ ನಿರ್ಮಾಣ ಕಾರ್ಯವನ್ನು ಪ್ರಶ್ನೆ ಮಾಡಬೇಕು ಎಂದು ಏಷ್ಯಾ-ಪೆಸಿಫಿಕ್ ವಲಯದ ಸೇನಾ ಬೆಳವಣಿಗೆಗಳನ್ನು ಗಮನಿಸುವ ಫ್ಲಿನ್ ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಎರಡನೇ ಸೇತುವೆ ನಿರ್ವಿುಸುತ್ತಿರುವುದು ಕಳೆದ ಜನವರಿಯಲ್ಲಿ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿತ್ತು. ಗಡಿ ರಸ್ತೆಗಳ ಅಭಿವೃದ್ಧಿ ಸರಹದ್ದಿನ ಸಮೀಪ ಏರ್​ಸ್ಟ್ರಿಪ್​ಗಳ ನಿರ್ವಣಗಳು ಪೂರ್ವ ಲಡಾಖ್​ಗೆ ಯಾವತ್ತಿದ್ದರೂ ಬೆದರಿಕೆ ಆಗಬಹುದು ಎಂದು ಮಿಲಿಟರಿ ತಜ್ಞರು ವಿಶ್ಲೇಷಿಸಿದ್ದರು.

ಗಲ್ವಾನ್ ಸಂಘರ್ಷದ ನಂತರ ಎರಡು ದೇಶಗಳ ಮಧ್ಯೆ ವಿರಸವನ್ನು ಶಮನಗೊಳಿಸಲು ಸೇನೆ ಮತ್ತು ರಾಜತಾಂತ್ರಿಕ ಮಾರ್ಗವಾಗಿ ಅನೇಕ ಸುತ್ತಿನ ಮಾತುಕತೆ ನಡೆದಿದೆ. ಎಲ್​ಎಸಿಯಲ್ಲಿ ವಿವಾದಾತ್ಮಕವಾಗಿದ್ದ ಆರು ಸ್ಥಳಗಳ ಪೈಕಿ ನಾಲ್ಕರಲ್ಲಿ ಚೀನಾ ಸೇನೆಯನ್ನು ಹಿಂದಕ್ಕೆ ಪಡೆದಿದೆ. ಇನ್ನೆರಡು ಸ್ಥಳಗಳಲ್ಲಿ ಸೇನೆ ಬೀಡುಬಿಟ್ಟಿದೆ.

ಗಡಿಯಲ್ಲಿ ಕಪಟ ನೀತಿ ಅನುಸರಿಸುವ ದೇಶವನ್ನು ವಿಶ್ವಾಸದಿಂದ ಕಾಣುವುದಾದರೂ ಹೇಗೆ? ಇಂಥ ನಡೆಗಳು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಖಂಡಿತ ಸಹಕಾರ ಅಲ್ಲ. ಚೀನಾದ ಇಂಥ ಕುತಂತ್ರಗಳನ್ನು ಎದುರಿಸಲು ನಾವು ಒಟ್ಟಾಗಿ ಶ್ರಮಿಸುವುದು ಅಗತ್ಯ | ಚಾರ್ಲ್ಸ್ ಎ. ಫ್ಲಿನ್ ಅಮೆರಿಕ ಸೇನೆ ಕಮಾಂಡಿಂಗ್ ಜನರಲ್

ಹಿಮಾಲಯದಲ್ಲಿ ತಾಲೀಮು: ಭಾರತ ಹಾಗೂ ಅಮೆರಿಕದ ಸೇನೆಗಳು ಹಿಮಾಲಯ ಶ್ರೇಣಿಯ 9,000ದಿಂದ 10,000 ಅಡಿ ಎತ್ತರದ ಪ್ರದೇಶದಲ್ಲಿ ಜಂಟಿ ತಾಲೀಮು ನಡೆಸುತ್ತಿವೆ. ‘ಆಯುಧ ಅಭ್ಯಾಸ’ ಹೆಸರಿನ ಈ ಕಸರತ್ತು ಮುಂದಿನ ಅಕ್ಟೋಬರ್​ನಲ್ಲೂ ನಡೆಯಲಿದೆ. ಇದೇ ರೀತಿಯ ಜಂಟಿ ಅಭ್ಯಾಸವು ಅಮೆರಿಕದ ಅಲಾಸ್ಕ ಪರ್ವತದಲ್ಲೂ ನಡೆಯಲಿದೆ. ವಿಪರೀತ ಚಳಿ ಪ್ರದೇಶದಲ್ಲಿ, ಹವಾಮಾನ ವೈಪರೀತ್ಯದ ಸ್ಥಳಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಯುದ್ಧ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು, ಎತ್ತರ ಪ್ರದೇಶದಲ್ಲಿನ ದಾಳಿಯನ್ನು ಹಿಮ್ಮೆಟ್ಟಿಸಲು ಅಗತ್ಯವಾದ ಲಾಜಿಸ್ಟಿಕ್ ಮತ್ತು ಇನ್ನಿತರ ಮಾಹಿತಿ ಹಂಚಿಕೊಳ್ಳುವುದು ಇದರ ಉದ್ದೇಶ ಎಂದು ಜನರಲ್ ಚಾರ್ಲ್ಸ್ ಫ್ಲಿನ್ ಹೇಳಿದ್ದಾರೆ.

ಭಾರತ ವಿಯೆಟ್ನಾಂ ಒಪ್ಪಂದ: ಭಾರತ ಮತ್ತು ವಿಯೆಟ್ನಾಂ 2030ರವರೆಗೆ ಸೇನಾ ಸಹಕಾರವನ್ನು ಇನ್ನುಷ್ಟು ವಿಸ್ತರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಪರಸ್ಪರ ಲಾಜಿಸ್ಟಿಕ್ ನೆರವನ್ನು ಹೆಚ್ಚಿಸುವುದು, ಉಭಯ ದೇಶಗಳ ಸೇನಾ ನೆಲೆಗಳನ್ನು ದುರಸ್ತಿ ಮತ್ತು ಸಲಕರಣೆಗಳ ಬದಲಾವಣೆಗಳಿಗೆ ಬಳಸಿಕೊಳ್ಳುವುದಕ್ಕೂ ಬದ್ಧತೆ ತೋರಿವೆ. ಮಾತುಕತೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಮತ್ತು ವಿಯೆಟ್ನಾಂನ ಜನರಲ್ ಫಾನ್ ವ್ಯಾನ್ ಗಿಯಾಂಗ್ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳು ಲಾಜಿಸ್ಟಿಕ್ ಸಹಕಾರಕ್ಕೆ ಮುಂದಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಪ್ರಾಬಲ್ಯವನ್ನು ತಡೆಯಲು ಸಹಕಾರಿ ಆಗಲಿದೆ.

ರಾಷ್ಟ್ರೀಯ ಭದ್ರತೆ ಉಲ್ಲಂಘನೆ ಮಾಹಿತಿ ಕೊಟ್ಟರೆ ಇನಾಮು: ರಾಷ್ಟ್ರೀಯ ಭದ್ರತೆ ಉಲ್ಲಂಘನೆ ಬಗ್ಗೆ ಮಾಹಿತಿ ನೀಡಿದವರಿಗೆ 15 ಸಾವಿರ ಡಾಲರ್ (ಒಂದು ಲಕ್ಷ ಯುವಾನ್) ಬಹುಮಾನ ನೀಡುವುದಾಗಿ ಚೀನಾ ಸರ್ಕಾರ ಘೋಷಿಸಿದೆ. ವಿದೇಶಿ ಬೇಹುಗಾರಿಕೆಯನ್ನು ನಿಮೂಲನೆಗೊಳಿಸಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯ ಗಹನತೆಯನ್ನು ಆಧರಿಸಿ 1,500 ಡಾಲರ್​ನಿಂದ 15 ಸಾವಿರ ಡಾಲರ್​ವರೆಗೆ ಬಹುಮಾನ ನೀಡಲಾಗುತ್ತದೆ ಎಂದು ಪೊಲೀಸ್ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net