

ಪುರಾಣೇತಿಹಾಸಗಳನ್ನು ಗಮನಿಸದಾಗ ಜಂಬೂ ದ್ವೀಪವನ್ನು ಅತ್ಯಂತ ಪವಿತ್ರವಾದ ಭೂಮಿ ಎಂದು ಪರಿಗಣಿಸಲಾಗಿದೆ ಎಂದು ಡಾ. ಕೆ. ಅನಂತರಾಮು ಹೇಳಿದರು.
ನಗರದ ಸುತ್ತೂರು ಶಾಖಾ ಮಠದಲ್ಲಿ ಶ್ರಾವಣ ಮಾಸದ 3ನೇ ದಿನವಾದ ಭಾನುವಾರ ಲಕ್ಕಣ್ಣ ದಂಡೇಶ ವಿರಚಿತ ಶಿವತತ್ವ ಚಿಂತಾಮಣಿ ಕುರಿತು ಪ್ರವಚನ ನೀಡಿದರು.
ಶಿವತತ್ವ ಚಿಂತಾಮಣಿಯ ಭುವನಕೋಶದಲ್ಲಿ ಕವಿಯು ಬ್ರಹ್ಮಾಂಡವನ್ನು ಅತ್ಯಂತ ವೈಭವಪೂರ್ಣವಾಗಿ ವರ್ಣಿಸಿದ್ದಾನೆ. ಬ್ರಹ್ಮಾಂಡವು 14 ಲೋಕಗಳನ್ನು ಹೊಂದಿದೆ. ಅತಳ, ವಿತಳ, ಪಾತಾಳ, ತಳಾತಳ, ರಸಾತಳ ಮತ್ತು ಮಹಾತಳ ಇವು ಕೆಳಗಿನ ಲೋಕಗಳು. ಭೂಲೋಕ, ಭುವರ್, ಸ್ವರ್ಗ, ಮಹರ್, ಜಲೋ, ತಪೋ ಮತ್ತು ಸತ್ಯಲೋಕಗಳು ಮೇಲಿನ ಲೋಕಗಳು ಎಂದು ಗುರತಿಸಲಾಗಿದೆ. ಇವುಗಳಲ್ಲಿ ಭೂಮಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ವಿಶಾಲ ಪರ್ವತಗಳು, ನದಿಗಳು, ದ್ವೀಪಗಳು, ಅರಣ್ಯಗಳು, ಜಲಪಾತಗಳಿಂದ ಕೂಡಿದೆ. ಲವಣ ದ್ವೀಪದಿಂದ ಸುತ್ತುವರಿದಿದೆ. ಸುಂದರವಾದ ಸೌಧಗಳು ಮತ್ತು ಭಕ್ತರ ನಿವಾಸಗಳಿಂದ ಕೂಡಿದೆ ಎಂದು ಕವಿ ತಿಳಿಸುತ್ತಾನೆ. ಅಖಂಡ ಜಂಬೂದ್ವೀಪವನ್ನು ಋಷಭದೇವನು ಆಳುತ್ತಿರುತ್ತಾನೆ. ಮುಂದೆ ಆತನು ತನ್ನ ಒಂಬತ್ತು ಜನ ಪುತ್ರರಾದ ಭರತ, ಕಿಂಪುರಷ, ಹರಿ, ಇಳಾವೃತ, ರಮ್ಯಕ, ಹಿರಣ್ಮಯ, ಕುರು, ಭದ್ರಾಶ್ವ ಮತ್ತು ಕೇತುಗಳಿಗೆ ಅಖಂಡ ರಾಜ್ಯವನ್ನು ಹಂಚುತ್ತಾನೆ. ಹೀಗೆ ಹಂಚಲಾದ ಅಖಂಡ ಭೂಮಿಯನ್ನು ನವಖಂಡಗಳು ಎಂದು ಕರೆಯಲಾಗುತ್ತದೆ. ಋಷಭದೇವನು ತನ್ನ ಪುತ್ರರಿಗೆ ಈ ಲೋಕದಲ್ಲಿ ಭಕ್ತಿಯೇ ಹೆಚ್ಚೆಂದು, ಕೆಲವರು ಕಲಿಯ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪಿದ್ದಾರೆ. ಅವರುಗಳು ಶಿವನಿಂದೆಯಲ್ಲಿ ತೊಡಗಿದ್ದಾರೆ. ಇತರರಿಗೆ ಹಿಂಸೆ ನೀಡುತ್ತಿದ್ದಾರೆ. ಅವರನ್ನು ಹಿಂಸಿಸದೇ ನಿವುಗಳು ಸರಿದಾರಿಗೆ ತರಬೇಕು ಎಂದು ಬೋಧಿಸುತ್ತಾನೆ ಎಂದು ಹೇಳಿದರು.
ಕೆ.ಪಿ.ವಿಜಯ್‌ಕುಮಾರ್ ಅವರು ಸೇವಾರ್ಥ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತರು ಹಾಗೂ ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.