ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ನಡೆಸಿ

somanna meeting
Published on

ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ತ್ವರಿತವಾಗಿ ನಡೆಯಬೇಕು. ಅದಕ್ಕೆ ಯಾವುದೇ ಸಹಕಾರ ಬೇಕಿದ್ದರೂ ಕೇಳಿ ನೀಡುತ್ತೇನೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಮೈಸೂರಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಮೈಸೂರು ವಿಭಾಗೀಯ ರೈಲ್ವೆ ಪ್ರಬಂಧಕರು ಹಾಗೂ ಇತರ ಅಧಿಕಾರಿಗಳೊಂದಿಗೆ ಭಾನುವಾರ ವಿಮರ್ಶಾ ಸಭೆ ನಡೆಸಿ ಮೈಸೂರಿನ ವಿಭಾಗೀಯ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಿಆರ್‌ಎಂ ಮುದಿತ್ ಮಿತ್ತಲ್ ಕಾಮಗಾರಿಗಳ ಬಗ್ಗೆ ವಿವರಿಸಿ, ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ 439.3 ಕೋಟಿ ರೂ.ವೆಚ್ಚದಲ್ಲಿ ಹೆಚ್ಚುವರಿಯಾಗಿ ಐದು ಪ್ಲಾಟ್ ಫಾರ್ಮ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಸಬ್ ವೇ, ಸ್ಕೈವಾಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ. ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಾಣ ಮಾಡಲಾಗುತ್ತಿದೆ. ಅದರ ಕಾಮಗಾರಿ ಪ್ರಗತಿಯಲ್ಲಿದೆ. ಮತ್ತೊಂದೆಡೆ ನಾಗನಹಳ್ಳಿ ಯಾರ್ಡ್‌ಗಾಗಿ 8 ಎಕರೆ 29ಕುಂಟೆ ಜಾಗವನ್ನು ಗುರುತು ಮಾಡಲಾಗಿದೆ. ಆದರೆ, ಅದಕ್ಕೆ ಭೂ ಸ್ವಾಧೀನದ ತೊಡಕು ಉಂಟಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.

ಬಳಿಕ ಮಾತನಾಡಿದ ಸಚಿವರು, ರೈಲ್ವೆ ಕ್ವಾರ್ಟರ್ಸ್‌ಗೆ ಪ್ರಧಾನ ಮಂತ್ರಿ ಚಾಲನೆ ನೀಡಿದ್ದು ಇನ್ನೂ ಏಕೆ ಕಾಮಗಾರಿ ತಡವಾಗಿದೆ? ಶೀಘ್ರವಾಗಿ ಕಾಮಗಾರಿ ಮುಗಿಸಿ, ಭೂ ಸ್ವಾಧೀನದ ವಿಚಾರವಾಗಿ ನಾನು ರಾಜ್ಯ ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರೈಲ್ವೆ ಇಲಾಖೆ ಸಂಬಂಧಿಸಿದಂತೆ ಎಲ್ಲ ಕೆಲಸಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಜೋಡಿಸಿ ಸಹಕಾರ ನೀಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರೈಲ್ವೆ ಇಲಾಖೆ ಬಗ್ಗೆ ಸಾಕಷ್ಟು ದೂರದೃಷ್ಟಿ ಇದ್ದು, ಇಲಾಖೆ ವತಿಯಿಂದ 39 ಸಾವಿರ ಕೋಟಿ ರೂ. ವೆಚ್ಚದ 13 ಯೋಜನೆ ನಡೆಯುತ್ತಿದೆ. ಪ್ರಮುಖವಾಗಿ ರಾಯದುರ್ಗ ಮತ್ತು ತುಮಕೂರು, ತುಮಕೂರು ಮತ್ತು ದಾವಣಗೆರೆ, ಕುಡುಚಿ ಮತ್ತು ಗದಗ ಸೇರಿದಂತೆ ಅನೇಕ ಯೋಜನೆಗಳು ನಡೆಯುತ್ತಿವೆ. 25 ವರ್ಷಗಳಿಂದ ಹಿಂದೆ ಉಳಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ತುಮಕೂರಿನಲ್ಲಿ ವಿಕಸಿತ ಭಾರತದಡಿ ಗ್ರೀನ್ ಕಾರಿಡಾರ್ ಮಾಡುತ್ತಿದ್ದೇವೆ. ಎಲ್ಲಿ ಕಾರ್ಖಾನೆಗಳಿವೆ. ಅಲ್ಲಿ ರೈಲ್ವೆ ಹಳಿಗಳನ್ನು ಅಳವಡಿಸಿ ಸರಕು ಸಾಗಣೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಸರಕು ಸಾಗಣೆ ವೆಚ್ಚವೂ ಕಡಿಮೆ ಆಗಲಿದೆ. 40 ವರ್ಷದಲ್ಲಿ ಏನು ಸೇವೆ ಮಾಡಿದ್ದೆನೋ ಅದನ್ನು ಕೇವಲ ಒಂದೂವರೆ ವರ್ಷದಲ್ಲಿ ಸೇವೆ ಮಾಡಿದ್ದೇನೆ. ದೇಶದ ಅಭಿವೃದ್ಧಿಯ ಸಂಕೇತ ರೈಲ್ವೆ ಎಂಬುದನ್ನು ತೋರಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಕಾಮಗಾರಿಗೆ ಒತ್ತಾಯ

ಚಾಮರಾಜನಗರ ಹೆಜ್ಜಾಲ, ಮೈಸೂರು-ಕುಶಾಲನಗರದ ಮಾರ್ಗದ ಕಾಮಗಾರಿ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ, ನಾನು ಪತ್ರ ಬರೆದು ಒತ್ತಡ ಹಾಕಿದ್ದೇನೆ. ಚಾಮರಾಜನಗರ ಸಂಸದ ಸುನೀಲ್ ಬೋಸ್ ಹಾಗೂ ಅವರ ತಂದೆ ಡಾ.ಎಚ್.ಸಿ.ಮಹದೇವಪ್ಪ ಅವರಿಗೂ ಹೇಳಿದೆ. ಏನೂ ಪ್ರಯೋಜನವಾಗಿಲ್ಲ. 15 ದಿನದೊಳಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ವಿ.ಸೋಮಣ್ಣ ತಿಳಿಸಿದರು.

ಜೂ.6ರಂದು ವಿಶ್ವದ ಭೂಪಟದಲ್ಲಿ ಭಾರತದ ಅಭಿವೃದ್ಧಿಯ ಸಂಕೇತವಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದು ಒಂದು ಐತಿಹಾಸಿಕ ದಿನವಾಗಿದೆ. ಸಾರ್ವಜನಿಕರು ಒಮ್ಮೆ ಭೇಟಿ ನೀಡಿ ಎಂದರು. ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಇದ್ದರು.

ರೈಲ್ವೆ ಅಧಿಕಾರಿಗಳಿಗೆ ಕನ್ನಡ ಪಾಠ!

ದೇಶದ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಕೆಲಸ ಮಾಡಲು ಬಂದು ಹಲವಾರು ವರ್ಷವಾಗಿದ್ದರೂ ಏಕೆ ನೀವು ಕನ್ನಡ ಕಲಿತಿಲ್ಲ. ಆದಷ್ಟೂ ಬೇಗ ಕನ್ನಡ ಕಲಿತುಕೊಳ್ಳಿ ಎಂದು ರೈಲ್ವೆ ಅಧಿಕಾರಿಗಳನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತರಾಟೆಗೆ ತೆಗೆದುಕೊಂಡರು.

ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಮೈಸೂರು ವಿಭಾಗೀಯ ರೈಲ್ವೆ ಪ್ರಬಂಧಕರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆಯಲ್ಲಿ ಅಧಿಕಾರಿಗಳು ಹಿಂದಿಯಲ್ಲೆ ಮಾಹಿತಿ ನೀಡಿದರು. ಈ ವೇಳೆ ಸಚಿವರು ಪ್ರತಿಕ್ರಿಯಿಸಿ, ನಾನು ಮೂರು ತಿಂಗಳಿನಲ್ಲಿ ಹಿಂದಿ ಕಲಿತುಕೊಂಡು ಎಲ್ಲ ಕಡೆ ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ. ಆದರೆ, ನೀವು ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲೇ ಕೆಲಸ ನಿರ್ವಹಿಸುತ್ತಿದ್ದಿರಿ, ಆದರೆ, ಕನ್ನಡ ಕಲಿತಿಲ್ಲ ಎಂದು ಗರಂ ಆದರು. ಮುಂದೆಯಾದರೂ ಕನ್ನಡ ಕಲಿತುಕೊಳ್ಳಿ, ಕನ್ನಡ ಕಲಿತುಕೊಂಡರೆ ಒಳಿತು ಎಂದರು.

ಸೌಜನ್ಯದಿಂದ ವರ್ತಿಸಿ

ರೈಲ್ವೆ ಇಲಾಖೆಗೆ ಯಾರೂ ಅನಿವಾರ್ಯವಲ್ಲ. ಆದರೆ ರೈಲ್ವೆ ಇಲಾಖೆ ಎಲ್ಲರಿಗೂ ಅನಿವಾರ್ಯ. ನಿಮ್ಮೊಂದಿಗೆ ಯಾರೇ ಮಾತನಾಡಿದರೂ ಸೌಜನ್ಯದಿಂದ ವರ್ತಿಸಿ, ಗೌರವಕೊಟ್ಟು ಮಾತನಾಡಿ ಎಂದು ಸಲಹೆ ನೀಡಿ, ಅಧಿಕಾರಿಯೊಬ್ಬರಿಗೆ ತರಾಟೆ ತೆಗೆದುಕೊಂಡರು. ನೀವು ತಪ್ಪು ಮಾಡಿದರೆ, ಹುಬ್ಬಳಿ ಅಲ್ಲ, ಕಾಶ್ಮೀರಕ್ಕೆ ಕಳುಹಿಸುತ್ತೇನೆ ಎಂದೂ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net