

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ತ್ವರಿತವಾಗಿ
ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಅತಿವೃಷ್ಟಿ ಮತ್ತು ಇನ್ನಿತರ ವಿಷಯಗಳ ಕುರಿತ ಅಧಿಕಾರಿಗಳ ಸಭೆ ನಡೆಸಿದ
ಅವರು, ಬೆಳೆ ಹಾನಿ ಪ್ರಮಾಣದ ಬಗ್ಗೆ ಸಮಗ್ರವಾಗಿ ಸಮೀಕ್ಷೆ ಮಾಡಬೇಕು. ಯಾವೊಬ್ಬ ಸಂತ್ರಸ್ತನೂ ಪರಿಹಾರದಿಂದ
ಹೊರಗುಳಿಯಬಾರದು ಎಂದರು.
ಬೆಳೆ ಹಾನಿ ಪರಿಹಾರ ವಿತರಣೆಗೆ ಅನುದಾನದ ಕೊರತೆ ಇಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳ ಬಳಿ ಹಣ
ಇದೆ. ಹಾಗಾಗಿ ತ್ವರಿತವಾಗಿ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ, ಅತಿವೃಷ್ಟಿಯಿಂದ 1092 ಹೆಕ್ಟೇರ್ ಭತ್ತ ಹಾಗೂ 281 ಹೆಕ್ಟೇರ್
ಮುಸುಕಿನ ಜೋಳ ಸೇರಿ ಒಟ್ಟಾರೆ 1,308 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಗಳಿಗೆ ಹಾನಿ ಅಂದಾಜಿಸಲಾಗಿದೆ. ಪ್ರಸ್ತುತ ಭತ್ತದ ಗದ್ದೆ
ಮತ್ತು ಮೆಕ್ಕೆಜೋಳ ಹಾಗೂ ಇತರ ಕೃಷಿ ಬೆಳೆಗಳ ಹಾನಿ ಕುರಿತು ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ವಾರದೊಳಗೆ ಸಮೀಕ್ಷೆ
ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಡಿಸಿ ಡಾ. ನಾಗೇಂದ್ರ
ಹೊನ್ನಳ್ಳಿ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.