ರೈತರದ ಸಮಸ್ಯೆಗೆ ಪ್ರಧಾನಿ ಸ್ಪಂದಿಸಲಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿಕೆ

Pushpa Amarnath-12jan19-dis
Published on

ವಿಜಯಪುರ : ಕೇಂದ್ರದ ರೈತ ವಿರೋಧಿ ನೀತಿ ಖಂಡಿಸಿ ದೆಹಲಿಯಲ್ಲಿ ರೈತರು ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಆದರೆ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು. ಕೊರೆಯುವ ಚಳಿಯಲ್ಲಿ ರೈತರು ಹೋರಾಟ ಮಾಡಿದ್ದರೂ, ಬಿಜೆಪಿ ನಾಯಕರು ಸೌಜನ್ಯಕ್ಕೂ ಅಲ್ಲಿ ಭೇಟಿ ನೀಡಿಲ್ಲ. ರೈತರ ಬೇಡಿಕೆಯನ್ನು ಮನ್ನಣೆಗೆ ತೆಗೆದುಕೊಳ್ಳದೆ ಕೇವಲ ಸಭೆ ನಡೆಸುವುದಕ್ಕಷ್ಟೇ ಸೀಮಿತಗೊಳಿಸಿದೆ. ಆರ್‌ಎಸ್‌ಎಸ್ ಅಜೆಂಡಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೇರ್ಪಡೆ ಮಾಡಿ ಸುಳ್ಳಿನ ಪ್ರಚಾರ ಹೆಚ್ಚಾಗಿ ನಡೆಯುತ್ತಿದೆ, ಆದರೆ ಕಾಂಗ್ರೆಸ್ ಪಕ್ಷ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯವನ್ನು ಹೊರತರುವ ಕೆಲಸ ಮಾಡಲಿದೆ. ಅದಕ್ಕಾಗಿ ನುರಿತ ತಂಡ ಸನ್ನದ್ಧಗೊಳಿಸುತ್ತಿದ್ದು, ಸತ್ಯವನ್ನು ಜಾಲತಾಣಗಳಲ್ಲಿ ಪ್ರತಿಪಾದಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿಗರು 2013 ರಿಂದಲೇ ನಮ್ಮ ದೇಶ ಪ್ರಗತಿಯಾಗಿದೆ ಎನ್ನುವ ಸುಳ್ಳನ್ನು ಬಿತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮನೆ-ಮನಗಳಿಗೆ ತಿಳಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಬಹುಮುಖ್ಯವಾಗಿ ಶ್ರಮಿಸಲಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕೆಲಸ ಕಣ್ಮರೆಯಾಗಿದೆ ಎಂದರು. * ಶ್ವೇತಪತ್ರ ಹೊರಡಿಸಲಿ ಪ್ರತಿಪಕ್ಷಗಳು ಹೋರಾಟ ಮಾಡಿದರೆ ಅದನ್ನು ದೇಶವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ಅಚ್ಚೇ ದಿನ್ ಕೊಡುವ ಆಶ್ವಾಸನೆ ನೀಡಿದವರು ಒಳ್ಳೆಯ ರಸ್ತೆ ಸಹ ನೀಡಿಲ್ಲ, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ಕೊಡುವ ಡ್ರಾಮಾ ಮಾಡಿ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಎಷ್ಟು ಸಬ್ಸಿಡಿ ದೊರಕಿದೆ ಎಂಬುದನ್ನು ಬಿಜೆಪಿ ನಾಯಕರು ಶ್ವೇತಪತ್ರ ಹೊರಡಿಸಲಿ ಎಂದರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ರಾಜ್ಯ ಸರ್ಕಾರ ಕೋಮಾ ಪರಿಸ್ಥಿತಿಯಲ್ಲಿದೆ. ವಿಜಯಪುರ ಜಿಲ್ಲೆಯ ಸಂಸದರು ನಾಪತ್ತೆಯಾಗಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಂತೂ ಬಿಜೆಪಿ ನಾಯಕರು ಕಣ್ಣಿಗೆ ಕಾಣಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ವಿದ್ಯಾವತಿ ಅಂಕಲಗಿ, ಭಾರತಿ ನಾವಿ, ಆರತಿ ಶಹಾಪುರ, ಮಂಜುಳಾ ಗಾಯಕವಾಡ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net