ರೈತರ ಸಮಸ್ಯೆಗಳಿಗೆ ಇಲಾಖೆ ಪರಿಹಾರ ಒದಗಿಸಲಿ

28sor2 krishika
ಸೊರಬದ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆ.ಜಿ.ಸುರೇಶ್ ಮಾತನಾಡಿದರು. ಎಸ್.ರೇವಣಪ್ಪ, ಶಾಂತಮ್ಮ, ಮಂಜುನಾಥ ರಾವ್, ಉಮೇಶ್ ಪಾಟೀಲ್, ಕೆ.ವಿ ಗೌಡ ಇತರರಿದ್ದರು.
Published on

ಸೊರಬ: ರೈತರ ಸಮಸ್ಯೆಗಳಿಗೆ ಎಲ್ಲ ಇಲಾಖೆಗಳು ಒಗ್ಗೂಡಿ ಪರಿಹಾರ ಒದಗಿಸಬೇಕು ಎಂದು ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಕೆ.ಜಿ.ಸುರೇಶ್ ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೃಷಿಕರು ಹವಾಮಾನ ಹಾಗೂ ಮಳೆಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೃಷಿ ಸಂಬಂಧಿತ ಇಲಾಖೆಗಳು ರೈತರಿಗೆ ಸೂಕ್ತ ಮಾಹಿತಿ ನೀಡಿ ಪರಿಹಾರ ದೊರಕಿಸಿಕೊಡಬೇಕು ಎಂದರು.

ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ ಕೃಷಿ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ಈ ಬಾರಿ ತಾಲೂಕಿನಲ್ಲಿ ನಿರಂತರ ಮಳೆಯಾಗಿದೆ. ವಾಡಿಕೆಯಂತೆ 45-60 ದಿನಗಳ ಕಾಲ ಮಳೆಯಾಗಬೇಕಿತ್ತು. ಬದಲಿಗೆ 120ಕ್ಕೂ ಹೆಚ್ಚು ದಿನ ಮಳೆ ಆಗಿದೆ. ರೈತರಿಂದ ಕೃಷಿ ಯಂತ್ರಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದಕ್ಕೆ ಅನುಗುಣವಾಗಿ ಪೂರೈಕೆಯಾಗುತ್ತಿದೆ. ತುಂತುರು ನೀರಾವರಿಗೆ ಅನುದಾನ ಇದ್ದು ಇಲಾಖೆಯ ನಿಯಮದಂತೆ ಹಂಚಿಕೆ ಮಾಡಲಾಗುತ್ತಿದೆ. ಜಡೆ ಮತ್ತು ಆನವಟ್ಟಿ ಭಾಗದ ರೈತರಿಗೆ ಹಿಂಗಾರು ಹಂಗಾಮಿಗೆ ಹೆಸರು, ಉದ್ದು ಸೇರಿ ಕಾಳು ಬೆಳೆಗಳ ಧಾನ್ಯಗಳ ಬೇಡಿಕೆ ಇದ್ದು ಇಲಾಖೆಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.

ತಾಲೂಕಿನ ತೊರವಂದ ಗ್ರಾಮದ 10 ರೈತರಿಗೆ ಕರ್ನಾಟಕ ರಾಜ್ಯ ಬೀಜ ನಿಗಮ ನೀಡಿದ ಜಯ ಎಂಬ ಹೆಸರಿನ ಬೀಜದ ಭತ್ತ ಕಳಪೆಯಾಗಿದ್ದು ಭತ್ತದ ಬದಲಿಗೆ ನೇರೆ ಭತ್ತ ತೆನೆ ಬಂದಿದೆ ಎಂದು ಜಿಲ್ಲಾ ಪ್ರತಿನಿಧಿ ಉಮೇಶ್ ಪಾಟೀಲ್ ಆರೋಪಿಸಿದರು. ಕಳಪೆ ಬಿತ್ತನೆ ಬೀಜ ನೀಡಿದವರನ್ನು ಬಂಧಿಸಬೇಕು ಮತ್ತು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ.ಕುಮಾರ ಮಾತನಾಡಿ, ಈಗಾಗಲೆ ಈ ಬಗ್ಗೆ ನಿಗಮಕ್ಕೆ ಮಾಹಿತಿ ನೀಡಿದ್ದು ಹೇಗೆ ಕಳಪೆಯಾಗಿದೆ ಎಂಬುದನ್ನು ತಿಳಿಯಲಾಗುವುದು ಎಂದರು.

ಕೃಷಿಕ ಸಮಾಜದ ಉಪಾಧ್ಯಕ್ಷ ಎಸ್.ರೇವಣಪ್ಪ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಮಂಜುನಾಥ ರಾವ್, ಉಮೇಶ್ ಪಾಟೀಲ್, ಸದಸ್ಯರಾದ ಕೆ.ವಿ.ಗೌಡ, ನಾಗರಾಜ್, ಜಿ.ವಿ.ದಯಾನಂದ ಗೌಡ, ಎಂ.ನಾಗರಾಜ್, ವಿರೂಪಾಕ್ಷಪ್ಪ, ಶಶಿಕಾಂತ ಬಿ. ಗೌಡ, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರದೀಪ್‌ಕುಮಾರ್, ತೋಟಗಾರಿಕೆ ಅಧಿಕಾರಿ ಮಂಜುನಾಥ, ಎಪಿಎಂಸಿ ವ್ಯವಸ್ಥಾಪಕ ನಿರ್ದೇಶಕಿ ಆಶಾ, ಕೃಷಿ ತಾಂತ್ರಿಕ ಅಧಿಕಾರಿ ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net