ರೈತರ ಬೇಡಿಕೆ ಈಡೇರಿಕೆಗೆ ಆಗ್ರಹ

CTD--0001....
Published on

ಚಿತ್ರದುರ್ಗ: ಹರಿಯಾಣದ ಶಂಭು ಗಡಿಯಲ್ಲಿ ಚಳವಳಿ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದೆಹಲಿ ಹೊರವಲಯದಲ್ಲಿ ಸತತ 13 ತಿಂಗಳ ಕಾಲ ನಡೆದ ಚಳುವಳಿ ಸಂದರ್ಭದಲ್ಲಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಸರ್ಕಾರ ಎಂಎಸ್‌ಪಿ ಜಾರಿಗೊಳಿಸದ ಕಾರಣ ಶಂಭು ಗಡಿಯಲ್ಲಿ ಕಳೆದ 8 ತಿಂಗಳಿಂದ ರೈತರು ಚಳವಳಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ರೈತ ನಾಯಕ ಜಗತ್‌ಸಿಂಗ್ ದಲ್ಲೈವಾಲ ಅವರು 39 ದಿನಗಳಿಂದ ನಿರಶನ ಕೈಗೊಂಡಿದ್ದು, ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಒದಗಿಸಿ ಜಗತ್‌ಸಿಂಗ್ ಅವರ ಜೀವ ಉಳಿಸಬೇಕೆಂದು ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದ್ದರೂ ಎರಡೂ ಸರ್ಕಾರಗಳು ನಿರ್ಲಕ್ಷೃ ವಹಿಸಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿ ರೈತ ಮುಖಂಡನ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಚಳವಳಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ, ಈಚಘಟ್ಟದ ಸಿದ್ದವೀರಪ್ಪ, ನಿರಂಜನಮೂರ್ತಿ, ಮರ‌್ಲಹಳ್ಳಿ ರವಿಕುಮಾರ್, ಬಿ.ಎಸ್. ರಂಗಸ್ವಾಮಿ, ಚಂದ್ರಮೌಳಿ, ಎಚ್. ಪ್ರಸನ್ನ, ಬಿ. ರಂಗಪ್ಪ, ಎಲ್. ರವಿಕುಮಾರ್, ಎಂ. ಆಂಜನೇಯಮೂರ್ತಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net