ರೈತರ ಬೆಳೆಗಳಿಗೆ ಕಂಟಕವದ ವರುಣ

11ark1
Published on

ಅರಕಲಗೂಡು: ತಾಲೂಕಿನಲ್ಲಿ ಭಾನುವಾರ ಮಳೆ ಅಬ್ಬರ ಚುರುಕಾಗಿದ್ದು ಕಟಾವಿಗೆ ಬಂದಿರುವ ಭತ್ತ ಮತ್ತು ರಾಗಿ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.


ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಣಾಮ ಶನಿವಾರ ಸಂಜೆ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ವರುಣನ ಸಿಂಚನವಾಗಿತ್ತು. ಭಾನುವಾರ ಮಳೆ ಬಿರುಸು ಪಡೆದಿದ್ದು ದಿನವಿಡೀ ಜಿಟಿಜಿಟಿಯಾಗಿ ಸುರಿಯಿತು. ಒಂದೇ ಸಮನೆ ಬೀಳುತ್ತಿರುವ ಚಳಿಗಾಲದ ಮಳೆ ಜನರನ್ನು ತಂಡಿ ಹಿಡಿಸಿದೆ. ಮಳೆಯಿಂದಾಗಿ ಒಂದೆಡೆ ಹಿಂಗಾರು ಬಿತ್ತನೆ ಮಾಡಿರುವ ಬೆಳೆಗಳಿಗೆ ವರದಾನವಾಗಿದ್ದರೆ, ಮತ್ತೊಂದೆಡೆ ಕಟಾವಿಗೆ ಬಂದಿರುವ ಭತ್ತದ ಗದ್ದೆಗಳು ಹಾಗೂ ರಾಗಿ ಹೊಲಗಳಲ್ಲಿ ನೀರು ನಿಂತಿದೆ.

ಕೆಲವು ಕಡೆ ರಾಗಿ ಕಟಾವು ನಡೆಸಿದ ಜಮೀನುಗಳಲ್ಲಿ ಮಳೆ ನೀರು ನಿಂತು ಫಸಲು ಕರಗಲಾರಂಭಿಸಿದೆ. ಕಟಾವು ಮಾಡಿರುವ ರಾಗಿ ಮಳೆಗೆ ಮುಗ್ಗಲು ಹತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ರೈತರು ಫಸಲು ಕಳೆದುಕೊಂಡು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಇನ್ನೊಂದೆಡೆ ಹಿಂಗಾರಿನಲ್ಲಿ ಬಿತ್ತಿದ ರಾಗಿ, ಜೋಳ, ಹುರುಳಿ, ಅವರೆ ಮತ್ತಿತರ ದ್ವಿದಳ ಧಾನ್ಯ ಬೆಳೆಗಳು ಬಿಸಿಲಿ ತಾಪಕ್ಕೆ ಒಣಗಿ ಹಾಳಾಗುತ್ತಿದ್ದವು. ಇದೀಗ ಸುರಿದ ಮಳೆ ಹಿಂಗಾರು ಬೆಳೆಗಳಿಗೆ ಅನುಕೂಲಕರವಾಗಿದೆ. ಆದರೆ ಕಟಾವಿಗೆ ಬಂದಿರುವ ಭತ್ತ ಮತ್ತು ರಾಗಿ ಫಸಲು ಮಳೆಗೆ ನಷ್ಟವಾಗಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net