ರೈತನ ಕೈಹಿಡಿದ ಮೀನುಗಾರಿಕೆ

9MDG1B MINUGARIKE
Published on

ಸಂತೋಷ ಮುರಡಿ ಮುಂಡರಗಿ
ಬಂಜರು ಭೂಮಿಯನ್ನು ಖರೀದಿಸಿ ವಿವಿಧ ಬೆಳೆಗಳನ್ನು ಬೆಳೆದು ಸತತ ಸೋಲು ಕಂಡ ರೈತನಿಗೆ ಕೊನೆಗೆ ಮೀನುಗಾರಿಕೆ ಕೃಷಿ ಕೈ ಹಿಡಿದಿದೆ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಈ ರೈತ ಸಾಕ್ಷಿಯಾಗಿದ್ದಾರೆ.
ತಾಲೂಕಿನ ಬಸಾಪೂರ ಗ್ರಾಮದ ಹನುಮಂತಪ್ಪ ನಗರ ಎಂಬುವ ರೈತ 15 ವರ್ಷಗಳ ಹಿಂದೆ ಬಸಾಪೂರದಲ್ಲಿ 3 ಎಕರೆ ಭೂಮಿ ಖರೀದಿಸಿದ್ದರು. ಆರಂಭದಲ್ಲಿ ಸ್ಟೋನ್ ಕ್ರಷರ್ ಘಟಕ ಹಾಕಿದ್ದರು. ನಾಲೈದು ವರ್ಷಗಳ ಹಿಂದೆ ಅದು ಬಂದ್ ಆಗಿದ್ದರಿಂದ ಈ ಭೂಮಿಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದರು. ಅಂಜೂರ, ಸಿಲ್ವರ್ ಗಿಡ ಹಾಗೂ ಭತ್ತ ಬೆಳೆದಿದ್ದರು. ಬಂಜರು ಭೂಮಿಯಾಗಿದ್ದರಿಂದ ಅವು ಒಣಗಿ ಬೆಳೆ ಬಾರದ ಪರಿಸ್ಥಿತಿ ನಿರ್ವಣವಾಯಿತು. ಇದರಿಂದ ಬೇಸತ್ತಿದ್ದ ಹನುಮಂತಪ್ಪ ಮುಂದೇನು ಮಾಡಬೇಕು ಚಿಂತೆಯಲ್ಲಿದ್ದರು. ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ 4 ತಿಂಗಳಿಂದ ಮೀನುಗಾರಿಕೆ ಕೃಷಿ ಆರಂಭಿಸಿ ಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ.
3 ಎಕರೆಯಲ್ಲಿ 1ಎಕರೆ 10 ಗುಂಟೆ ವಿಸ್ತೀರ್ಣದ ಒಂದು ಕೆರೆ, 1 ಎಕರೆಯಲ್ಲಿ ಮತ್ತೊಂದು ಕೆರೆ ಮಾಡಿದ್ದಾರೆ. ಇನ್ನೂ 1ಎಕರೆ ಪ್ರದೇಶದಲ್ಲಿ 5 ಬೃಹತ್ ಹೊಂಡಗಳನ್ನು ನಿರ್ವಿುಸಿದ್ದಾರೆ. ಕೊಪ್ಪಳ ಜಿಲ್ಲೆಯ ಶಿವಪುರ ಮೀನುಮರಿ ಉತ್ಪಾದಕ ಘಟಕದಿಂದ 1500 ರೂ.ಗೆ 1 ಲಕ್ಷ ಮೀನು ಮರಿಯಂತೆ ಒಟ್ಟು 26 ಲಕ್ಷ ಮೀನುಮರಿಗಳನ್ನು ತಂದು 5 ಹೊಂಡಗಳಲ್ಲಿ ಬಿಟ್ಟಿದ್ದಾರೆ. 1 ರೂ.ಗೆ ಒಂದರಂತೆ 2.5 ಇಂಚಿನ 20 ಸಾವಿರ ಮೀನು ತಂದು ಎರಡೂ ಕೆರೆಯಲ್ಲಿ ಬಿಟ್ಟು ಸಾಕಾಣಿಕೆ ಮಾಡುತ್ತಿದ್ದಾರೆ.
ಹನುಮಂತಪ್ಪನವರ ಜಮೀನಿನ ಪಕ್ಕದಲ್ಲಿ ಬಸಾಪೂರ ಹಳ್ಳ ಹರಿದು ಹೋಗಿದೆ. ಸಿಂಗಟಾಲೂರ ಏತ ನೀರಾವರಿ ಮುಖ್ಯಕಾಲುವೆ ಮೂಲಕ ಶಿರೋಳ ಕೆರೆಗೆ ಈ ಹಳ್ಳದ ಮೂಲಕ ತುಂಗಭದ್ರಾ ನದಿ ನೀರು ಹರಿಸಲಾಗುತ್ತದೆ. ಹಳ್ಳದ ನೀರನ್ನು ಕೆರೆ ಮತ್ತು ಹೊಂಡಕ್ಕೆ ಪಂಪ್​ಸೆಟ್​ನಿಂದ ತುಂಬಿಸುತ್ತಾರೆ. ಜಮೀನಿನಲ್ಲಿ ಎರಡು ಬೋರ್​ವೆಲ್ ಕೊರೆಸಿದ್ದು, ಹಳ್ಳಕ್ಕೆ ನೀರು ಬರದಿದ್ದಾಗ ಬೋರ್​ವೆಲ್ ನೀರನ್ನು ಕೆರೆಗಳಿಗೆ ಬಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
2 ಕೆರೆ ಮತ್ತು 5 ಹೊಂಡದಲ್ಲಿ ಕಾಟ್ಲಾ, ರೊವಾ, ಕಾಮನ್ ಕಾರ್ಪ್, ಗೌರಾ ತಳಿಯ ಮೀನುಗಳನ್ನು ಬಿಡಲಾಗಿದೆ. 5 ಹೊಂಡಗಳಲ್ಲಿ 25 ಲಕ್ಷ ಮೀನುಗಳಿದ್ದರೂ ಕೇವಲ 5 ಲಕ್ಷ ಮೀನುಗಳು ಬದುಕುಳಿದು ದೊಡ್ಡದಾಗುವ ನಿರೀಕ್ಷೆ ಹೊಂದಿದ್ದಾರೆ. 4 ತಿಂಗಳಿಂದ ಮೀನುಗಳನ್ನು ಸಾಕುತ್ತಿದ್ದಾರೆ. ಈಗಾಗಲೇ 50 ಸಾವಿರ ಮೀನು ಮರಿಗಳನ್ನು 1 ರೂ.ಗೆ ಒಂದರಂತೆ ಮಾರಾಟ ಮಾಡಿದ್ದಾರೆ. ಹಾಗೆಯೇ 2.5 ಇಂಚಿನ 20 ಸಾವಿರ ಮೀನುಗಳನ್ನು 1 ವರ್ಷದವರೆಗೆ ಸಾಕಿದರೆ 1 ಮೀನು 1 ಕೆಜಿವರೆಗೂ ತೂಕ ಬರುತ್ತದೆ. ಅದನ್ನು ಮಾರುಕಟ್ಟೆಯಲ್ಲಿ ಪ್ರತಿಕೆಜಿಗೆ ಕನಿಷ್ಠ 100 ರೂ.ನಂತೆ ಮಾರಾಟ ಮಾಡಿದರೆ ಉತ್ತಮ ಆದಾಯ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮೀನುಗಳಿಗೆ ಅಕ್ಕಿಪಾಲಿಶ್ ಮಾಡಿದ ತೌಡು, ಶೇಂಗಾ, ಕುಸಬಿ ಹಾಗೂ ಕೊಬ್ಬರಿ ಹಿಂಡಿ, ಅಕ್ಕಿ ನುಚ್ಚು ಹಾಕಲಾಗುತ್ತದೆ. ಪ್ರತಿ ದಿನಕ್ಕೆ 25 ಕೆಜಿಯಷ್ಟು ಆಹಾರ ನೀಡುತ್ತಾರೆ.

ಮೀನುಗಾರಿಕೆ ಇಲಾಖೆ ಸಬ್ಸಿಡಿ: ರೈತ ಹನುಮಂತಪ್ಪ ಅವರು ಕೆರೆ ಮತ್ತು ಹೊಂಡ ನಿರ್ವಿುಸಿಕೊಂಡು ಮೀನುಗಾರಿಕೆ ಮಾಡಲು ಮೀನುಗಾರಿಕೆ ಇಲಾಖೆಯು 6.95 ಲಕ್ಷ ರೂ.ಅನುದಾನ ನೀಡಿದೆ. 2 ಲಕ್ಷ ರೂಪಾಯಿಗಳನ್ನು ಸ್ವತಃ ತಾವೇ ಹೆಚ್ಚುವರಿಯಾಗಿ ಖರ್ಚು ಮಾಡಿದ್ದು ಸುಮಾರು 8.95 ಲಕ್ಷ ರೂ.ವರೆಗೆ ಖರ್ಚು ಮಾಡಲಾಗಿದೆ.

ಮರಿಗಳ ಉತ್ಪಾದನೆ ಘಟಕ: ಹನುಮಂತಪ್ಪ ಅವರು ಮೀನು ಸಾಕಾಣಿಕ ಮಾಡುವುದಷ್ಟೇ ಅಲ್ಲ, ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಮೀನಿನಲ್ಲಿ ಮೀನು ಉತ್ಪಾದಕ ಘಟಕ ನಿರ್ವಿುಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಮೀನು ಉತ್ಪಾದಕ ಘಟಕವಿಲ್ಲ, ಹನುಮಂತಪ್ಪ ಅವರು ಇಂತಹ ಕಾರ್ಯಕ್ಕೆ ಮುಂದಾಗಿದ್ದು, ಮೀನುಮರಿ ಉತ್ಪಾದಕ ಘಟಕ ನಿರ್ವಣಕ್ಕೆ ಮೀನುಗಾರಿಕೆ ಇಲಾಖೆಯು ಅನುದಾನ ನೀಡಲು ಮುಂದಾಗಿದೆ.

ಯೋಜನೆ ಸದುಪಯೋಗಕ್ಕೆ ಸಲಹೆ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗೆ ಅನುದಾನ ನೀಡಲಾಗುತ್ತದೆ. ಹನುಮಂತಪ್ಪ ಅವರ ಜಮೀನಿನಲ್ಲಿ ಮೀನುಮರಿ ಸಾಕಾಣಿಕೆ ಮತ್ತು ಉತ್ಪಾದನಾ ಘಟಕ ಮಾಡಲು 15 ಲಕ್ಷ ರೂ.ಅನುದಾನ ನೀಡಲಾಗುತ್ತಿದೆ. ಈಗಾಗಲೇ 6.95 ಲಕ್ಷ ರೂ. ಅನುದಾನ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಮೀನು ಮರಿ ಉತ್ಪಾದನಾ ಘಟಕವಿಲ್ಲದ ಕಾರಣ ಶಿವಪುರ, ಶಿವಮೊಗ್ಗ, ಹೊಸಪೇಟೆ ಭಾಗದ ಮೀನು ಮರಿ ಉತ್ಪಾದನಾ ಘಟಕದಿಂದ ಮೀನು ಮರಿಯನ್ನು ತರಲಾಗುತ್ತಿತ್ತು. ಈಗ ಜಿಲ್ಲೆಯಲ್ಲಿ ಈ ರೀತಿಯ ಘಟಕ ನಿರ್ವಣದಿಂದ ಮೀನುಮರಿ ಖರೀದಿಸುವವರಿಗೆ ಅನುಕೂಲವಾಗುತ್ತದೆ. ಈ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಲಾಗುತ್ತದೆ. ರೈತರು ಇಂತಹ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಗದಗಿನ ಉಪ ನಿರ್ದೇಶಕ ಎಸ್.ರಾಜಣ್ಣ.

ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದೆ. ಆಗ ನನಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೀನು ಸಾಕಾಣಿಕೆಗೆ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹ ನೀಡುವ ಮೂಲಕ ನಮಗೆ ಮರು ಜನ್ಮ ನೀಡಿದ್ದಾರೆ. 4 ತಿಂಗಳಲ್ಲಿ 50 ಸಾವಿರ ರೂ. ಆದಾಯ ಬಂದಿದೆ. ಇನ್ನೂ ಲಕ್ಷಾಂತರ ಮೀನುಗಳಿದ್ದು, ಅವುಗಳಿಂದ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದೇನೆ. ಮೀನುಗಾರಿಕೆ ಮೂಲಕ ನೆಮ್ಮದಿ ದೊರೆತಿದೆ.| ಹನುಮಂತಪ್ಪ ನಗರ, ಬಸಾಪೂರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net