ರೈತ ಸಂಘದಿಂದ ಹೈ ಟೆನ್ಷನ್ ಪ್ರತಿಭಟನೆ

9
Published on

ಬಸ್ತಿಪುರ ಮಾರ್ಗವಾಗಿ ಕಡಕೊಳದವರೆಗೆ ಹೈ ಟೆನ್ಷನ್ ವಿದ್ಯುತ್ ಸಂಪರ್ಕದ ಕಂಬ ನೆಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಯಾವುದೇ ಅಭಿವೃದ್ಧಿ ಕಾರ್ಯವಾಗಲಿ, ಇನ್ಯಾವುದೇ ಕೆಲಸ ಕಾರ್ಯ ಮಾಡಲು ಸೂಕ್ತ ರೀತಿ ನೀತಿ ಹಾಗೂ ಕಾಯ್ದೆಗಳಿರುತ್ತವೆ. ಮೇಲ್ನೋಟಕ್ಕೆ ಸಕ್ಷಮ ಇಲಾಖೆಗಳು ಈ ಪ್ರಕ್ರಿಯೆಯಲ್ಲಿ ಸೋತಂತೆ ಕಾಣುತ್ತಿವೆ. ಬಸ್ತಿಪುರದಿಂದ ಕಡಕೊಳದ ಮಾರ್ಗವಾಗಿ ಸುಮಾರು 500 ರೈತ ಕುಟುಂಬಗಳಿಗೆ ಸೇರಿದ ಭೂಮಿಗೆ, ಬೆಳೆಗಳಿಗೆ, ಅವರ ಆರೋಗ್ಯದ ಮೇಲೆ ಮತ್ತು ಭವಿಷ್ಯದಲ್ಲಿ ಭೂಮಿಯ ಮಾರುಕಟ್ಟೆ ಬೆಲೆಗೆ ಮಾರಕವಾಗುವ ಹೈ ಟೆನ್ಷನ್ ವಿದ್ಯುತ್ ಕಂಬಗಳನ್ನು ನೆಡಲು ಹೊರಟಿರುವ ಕೆಪಿಟಿಸಿಎಲ್ ಹಾಗೂ ಜಿಲ್ಲಾಡಳಿತದ ನಡೆ ಖಂಡನೀಯ ಎಂದು ಕಿಡಿಕಾರಿದರು.

ಕೆಪಿಟಿಸಿಎಲ್, ಸಂಬಂಧಪಟ್ಟ ಇಲಾಖೆಗಳು ರೈತರ ಸಮಸ್ಯೆ ಬಗೆಹರಿಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ವಿದ್ಯುತ್ ಕಂಬ ಹಾಕಲು ರೈತರಿಗೆ ತೊಂದರೆ ಕೊಟ್ಟು, ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರೆ ಅದಕ್ಕೆ ಪ್ರತ್ಯುತ್ತರವಾಗಿ ರೈತರು ತಮ್ಮ ಭೂಮಿಯನ್ನು ಕಾಪಾಡಿಕೊಳ್ಳಲು ಹೋರಾಟದ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ನೇರವಾಗಿ ರೈತರನ್ನು ಪ್ರಚೋದಿಸಿದಂತಾಗುತ್ತದೆ. ಹೀಗಾಗಿ ಈ ವಿಚಾರವನ್ನು ಕೈ ಬಿಟ್ಟು ರೈತರಿಗೆ ತೊಂದರೆ ಕೊಡದೆ ಇರುವಂತೆ ಕೆಪಿಟಿಸಿಎಲ್ ಎಚ್ಚರಿಕೆ ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಮಂಡಳಿಯ ಸದಸ್ಯ ಹೊನ್ನೂರು ಪ್ರಕಾಶ್, ರಾಜ್ಯ ಕಾರ್ಯದರ್ಶಿ ಮಂಜು ಕಿರಣ್, ರೈತರಾದ ಕಡಕೊಳ ನಾಗರಾಜ್, ಸಿಂಧುವಳ್ಳಿ ಜಬ್ಬಾರ್, ಗೋಪಾಲಪುರ ಬೈರೇಗೌಡ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net