

ನಂಜನಗೂಡು: ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜಾನುವಾರು ಪ್ರಾಂಗಣದಲ್ಲಿ ನಡೆಯುತ್ತಿರುವ ಸಗಟು ತರಕಾರಿ ಮಾರುಕಟ್ಟೆಯನ್ನು ಹುಲ್ಲಹಳ್ಳಿ ರಸ್ತೆಯಲ್ಲಿರುವ ಎಪಿಎಂಸಿಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಜಾನುವಾರು ಪ್ರಾಂಗಣದಲ್ಲಿ ಯಾವುದೇ ಮೂಲಸೌಕರ್ಯ ಒದಗಿಸದೆ ಸಗಟು ತರಕಾರಿ ಮಾರಾಟ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಮಾರುಕಟ್ಟೆ ಆವರಣ ಕೆಸರು ಗದ್ದೆಯಂತಾಗುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಪ್ರತಿ ಶುಕ್ರವಾರ ನಡೆಯುವ ಸಂತೆಯಲ್ಲಿ ರೈತರು ರಸ್ತೆ ಬದಿಯಲ್ಲೇ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವಂತಾಗಿದೆ. ಹೀಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಮುಖ್ಯ ಮಾರುಕಟ್ಟೆಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.
ಎರಡು ದಿನದಲ್ಲಿ ಕಾರ್ಯಾರಂಭ: ಸ್ಥಳಕ್ಕಾಗಮಿಸಿ ಅಹವಾಲು ಸ್ವೀಕರಿಸಿದ ತಹಸೀಲ್ದಾರ್ ಶಿವಕುಮಾರ್, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳ ನಿಗದಿಪಡಿಸಿ, ಎರಡು ದಿನಗಳಲ್ಲಿ ವಹಿವಾಟು ಆರಂಭವಾಗುವಂತೆ ನೋಡಿಕೊಳ್ಳಲಾಗುವುದು. ಜತೆಗೆ ರೈತರ ನೇರ ಮಾರಾಟ ಮಳಿಗೆಗೆ ಸ್ಥಳ ನಿಗದಿಪಡಿಸುವುದಾಗಿ ಭರವಸೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಮಹೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹಿಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್‌ರಾವ್, ಕತ್ವಾಡಿಪುರ ಶಿವಣ್ಣ, ಹರತಲೆ ಕೆಂಪಣ್ಣ ಇತರರು ಇದ್ದರು.