

ಹುಣಸೂರು: ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮೇಲೆ ಗೊಬ್ಬರ ಮಾರಾಟಗಾರರೊಬ್ಬರು ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸದಸ್ಯರು ರಾಸಾಯನಿಕ ಗೊಬ್ಬರ ಮಳಿಗೆ ಮಾಲೀಕ ಹೊಸೂರು ಗೇಟ್‌ನ ಎಚ್.ಬಿ.ರಾಮಕೃಷ್ಣ ಅಲಿಯಾಸ್ ಅಣ್ಣಯ್ಯರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ತಾಲೂಕಿನಲ್ಲಿ ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.
ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ತಾಲೂಕಿನಲ್ಲಿ ಯೂರಿಯಾ ಸಿಗದೆ ರೈತರು ಪರದಾಡುತ್ತಿದ್ದಾರೆ. ಇಲಾಖೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸರಬರಾಜು ಮಾಡುತ್ತಿದ್ದರೂ ಬೇಡಿಕೆ ಹೆಚ್ಚಾಗಿರುವ ಕಾರಣ ಮಾರಾಟಗಾರರು ಕಾಳಸಂತೆಯಲ್ಲಿ ಯೂರಿಯಾವನ್ನು ಲೋಡ್‌ಗಟ್ಟಲೇ ಪಕ್ಕದ ಕೇರಳಕ್ಕೆ ಸಾಗಿಸುವ ಮೂಲಕ ಇಲ್ಲಿ ಕೃತಕ ಅಭಾವ ಸೃಷ್ಟಿಸಿ ದಂಧೆ ಮಾಡುತ್ತಿದ್ದಾರೆ. ಈ ಕುರಿತು ಹೊಸೂರು ಗೇಟ್ ಬಳಿಯಿರುವ ಅಣ್ಣಯ್ಯರ ಮಾರಾಟ ಮಳಿಗೆಯಲ್ಲಿ ನಿಗದಿತ ದರಕ್ಕಿಂತ ಅಧಿಕ ಹಣ ಪಡೆಯುತ್ತಿರುವ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಪ್ರಶ್ನಿಸಿ ರೈತರಿಗೆ ತೊಂದರೆ ನೀಡಬಾರದೆಂದು ತಿಳಿವಳಿಕೆ ನೀಡಲು ಪ್ರಯತ್ನಿಸಿದ ವೇಳೆ ಮಾಲೀಕರು, ಮತ್ತವರ ಕಡೆಯವರು ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಸರ್ಕಾರ ರಾಸಾಯನಿಕ ಗೊಬ್ಬರ ಪೂರೈಕೆಯಲ್ಲಿ ಕ್ರಮ ವಹಿಸಿದ್ದರೂ ಕೃತಕ ಅಭಾವ ಸೃಷ್ಟಿಸುವವರನ್ನು ತಡೆಯುವಲ್ಲಿ ವಿಫಲವಾಗಿದೆ. ಇದಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿರುವ ಮಾರಾಟಗಾರರನ್ನು ಗುರುತಿಸಿ ಕ್ರಮ ವಹಿಸುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ. ಮಾರುಕಟ್ಟೆಯಲ್ಲಿ 500 ರೂ.ಗಳಿಗೆ ಯೂರಿಯಾ ಮಾರಾಟವಾಗುತ್ತಿದೆ. ಇದನ್ನು ಅಧಿಕಾರಿಗಳು ತಡೆಯುತ್ತಿಲ್ಲ. ಈ ಕೂಡಲೇ ಕಠಿಣ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಇನ್ನೆರಡು ದಿನದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಾಲೂಕಿನ ರಾಸಾಯನಿಕ ಗೊಬ್ಬರ ಮಾರಾಟಗಾರರ ಸಭೆಯನ್ನು ಆಯೋಜಿಸಿ ಸಮಸ್ಯೆ ಕುರಿತು ಪರಿಶೀಲಿಸಲು ಈಗಾಗಲೇ ಸೂಚಿಸಿದ್ದೇನೆ. ಪ್ರತಿ ಮಾರಾಟ ಮಳಿಗೆಯಲ್ಲೂ ರಸಗೊಬ್ಬರಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಲು, ರೈತರು ಖರೀದಿಸಿದ ರಸಗೊಬ್ಬರಕ್ಕೆ ಕಡ್ಡಾಯವಾಗಿ ಬಿಲ್ ಪಾವತಿಸಲು ಸೂಚಿಸುತ್ತೇನೆ. ಕಾಳಸಂತೆಕೋರರ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಕಾಳಸಂತೆಕೋರರ ಹೆಡೆಮುರಿ ಕಟ್ಟಲು ಸೂಕ್ತ ಕ್ರಮಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇನೆಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರತ್ನಪುರಿ ಪುಟ್ಟಸ್ವಾಮಿ, ಬೆಂಕಿಪುರ ಚಿಕ್ಕಣ್ಣ, ರಾಮೇಗೌಡ, ನಿಲುವಾಗಿಲು ಪ್ರಭಾಕರ್, ಉಂಡುವಾಡಿ ಸಿ.ಚಂದ್ರೇಗೌಡ, ನಿಲುವಾಗಿಲು ಪ್ರಭಾಕರ್, ಚಿಕ್ಕಹುಣಸೂರು ರಾಜು, ಶಿವಣ್ಣ, ಗಜೇಂದ್ರ, ರಾಮೇಗೌಡ, ದೇವೇಂದ್ರ ಇತರರಿದ್ದರು.