ರೇಣುಕಸ್ವಾಮಿ ಹತ್ಯೆ ಪ್ರಕರಣ: 120 ಕ್ಕೂ ಹೆಚ್ಚಿನ ಸಾಕ್ಷೃಗಳ ಸಂಗ್ರಹ

darshan
Published on

ಬೆಂಗಳೂರು: ರಾಷ್ಟ್ರ ಮತ್ತು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಬರೋಬ್ಬರಿ ೧೨೦ಕ್ಕೂ ಹೆಚ್ಚಿನ ಸಾಕ್ಷೃಗಳನ್ನು ಕಲೆ ಹಾಕಿದ್ದಾರೆ. ಮತ್ತೊಂದೆಡೆ ನಟ ದರ್ಶನ್ ಅವರ ವಿಚಾರಣೆ ೧೨ ನೇ ದಿನಕ್ಕೆ ಕಾಲಿಟ್ಟಿದೆ.
ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಹಾಗೂ ಪ್ರಕರಣದಿಂದ ಪಾರಾಗಲು ನಟ ದರ್ಶನ್ ಖರ್ಚು ಮಾಡಿದ್ದ ಹಣವನ್ನ ತಮ್ಮ ಆಪ್ತರೊಬ್ಬರಿಂದ ಸಾಲ ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ದರ್ಶನ್ ಆಪ್ತ ಮೋಹನ್ ರಾಜ್ ಎಂಬುವವರಿಂದ ೪೦ ಲಕ್ಷ ರೂ. ಸಾಲದ ರೂಪದಲ್ಲಿ ನೀಡಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಹತ್ಯೆ ಪ್ರಕರಣದಲ್ಲಿ ಮುಂದೆ ಸಂಕಷ್ಟ ಎದುರಾದರೆ ಯಾವುದೇ ರೀತಿಯಲ್ಲೂ ತಮ್ಮ ವಿರುದ್ಧ ಸಾಕ್ಷ್ಯಗಳು ಇರಬಾರದು ಎಂಬ ಕಾರಣಕ್ಕೆ ಇತರೆ ಆರೋಪಿಗಳನ್ನು ಒಪ್ಪಿಸಲು ಹಣದ ಅಗತ್ಯವಿತ್ತು. ಆದ್ದರಿಂದ ಬೇರೆಯವರನ್ನು ಠಾಣೆಗೆ ಶರಣು ಮಾಡಿಸಲು ಹಾಗೂ ಸಾಕ್ಷ್ಯ ನಾಶಕ್ಕಾಗಿ ಸ್ನೇಹಿತ ಮೋಹನ್ ರಾಜ್ ಕಡೆಯಿಂದ ೪೦ ಲಕ್ಷ ರೂ.ಪಡೆದುಕೊಂಡಿದ್ದೆ ಎಂದು ತನಿಖೆ ವೇಳೆ ದರ್ಶನ್ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮೋಹನ್ ರಾಜ್‌ಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಸಿದ್ದತೆ ನಡೆಸಿದ್ದು, ಸದ್ಯ ತಲೆಮರೆಸಿಕೊಂಡಿರುವ ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಪವಿತ್ರಾಗೌಡ ಕೈದಿ ನಂಬರ್ ೬೦೨೪:
ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಗೆಳತಿ, ನಟಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ೨ ರಾತ್ರಿ ಕಳೆದಿದ್ದು, ಸರಿಯಾಗಿ ನಿದ್ದೆ ಬಾರದೇ ಚಡಪಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲಿಗೆ ಪವಿತ್ರಾಗೌಡನನ್ನು ‘ಡಿ’ ಬ್ಯಾರಕ್ ಇರಿಸಲಾಗಿತ್ತು. ಬಳಿಕ ೬೦೨೪ ಕೈದಿ ಸಂಖ್ಯೆ ನೀಡಲಾಗಿದೆ. ಗುರುವಾರ ರಾತ್ರಿ ೧೧ ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೇ ಎದ್ದು ಕುಳಿತಿದ್ದಾರೆ. ಶುಕ್ರವಾರ ಮುಂಜಾನೆ ೫ ಗಂಟೆಗೆ ಎದ್ದು ಜೈಲಿನ ಬ್ಯಾರೆಕ್‌ನಲ್ಲಿ ವಾಕಿಂಗ್ ಮಾಡಿ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಉಪ್ಪಿಟ್ಟು, ಕಾಫಿ ಕುಡಿದಿದ್ದಾರೆ. ಮಧ್ಯಾಹ್ನ ಅನ್ನ, ಸಾಂಬಾರ್, ಮುದ್ದೆ ತಿಂದಿದ್ದಾರೆ. ರಾತ್ರಿಯೂ ಅನ್ನ ಸಾಂಬಾರ್ ಸೇವಿಸಿದ್ದಾರೆ. ಉಳಿದ ೯ ಆರೋಪಿಗಳು ಕ್ವಾರಂಟೈನ್ ಸೆಲ್‌ನಲ್ಲಿ ಒಂದೇ ಕಡೆಯಿದ್ದಾರೆ. ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಪವಿತ್ರಾಗೌಡ ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಅವರು ಸಂಪೂರ್ಣ ಆರೋಗ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂಗೆ ಪತ್ರ:
ಹತ್ಯೆಯಾದ ರೇಣುಕಸ್ವಾಮಿ ಹಾಗೂ ಪವಿತ್ರಾ ಗೌಡ ನಡುವಿನ ಸಂದೇಶಗಳ ವಿವರ ನೀಡುವಂತೆ ಕೋರಿ ಇನ್‌ಸ್ಟಾಗ್ರಾಂಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ.
ನಟಿ ಪವಿತ್ರಾ ಗೌಡ ಫೋನ್ ವಶಪಡಿಸಿಕೊಂಡು ರಿಟ್ರೈವ್ ಮಾಡಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆದರೆ, ರೇಣುಕಸ್ವಾಮಿ ಮೊಬೈಲ್ ಡೇಟಾವನ್ನು ಕೂಡ ಪಡೆಯಬೇಕಿದೆ. ಆತನನ್ನು ಹತ್ಯೆ ಮಾಡಿದ ಬಳಿಕ ಆತನ ಮೊಬೈಲ್ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಎಸೆದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಕಳೆದ ಕೆಲ ದಿನಗಳಿಂದ ಪೊಲೀಸರು ರೇಣುಕಸ್ವಾಮಿ ಫೋನ್‌ಗಾಗಿ ಸುಮನಹಳ್ಳಿಯ ಅಪಾರ್ಟ್‌ಂಮೆಟ್ ಬಳಿಯ ಮೋರಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ರೇಣುಕಸ್ವಾಮಿ ಮೊಬೈಲ್ ಮಾತ್ರ ಪತ್ತೆಯಾಗಿಲ್ಲ. ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಜಯನಗರ ಎಸಿಪಿ ಚಂದನ್ ತನಿಖೆ ನಡೆಸುತ್ತಿದ್ದು, ತಾಂತ್ರಿಕ ಸಾಕ್ಷೃ ಸಂಗ್ರಹಿಸುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂಗೆ ಪತ್ರ ಬರೆದು ಇಬ್ಬರ ನಡುವೆ ನಡೆದ ಚಾಟ್ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net