

ನವದೆಹಲಿ: ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಕಾರಣ ಹಣದುಬ್ಬರ ಪ್ರಮಾಣ, ಜಿಡಿಪಿ ಬೆಳವಣಿಗೆ ಮುನ್ನೋಟವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪರಿಷ್ಕರಿಸಿದೆ. ಇದೇ ವೇಳೆ, ರೆಪೋ ದರವನ್ನು ಸ್ಥಿರವಾಗಿ ಇರಿಸುವ ತೀರ್ಮಾನ ಪ್ರಕಟಿಸಿದೆ. ಆರ್ಬಿಐನ ಹಣಕಾಸು ನೀತಿ ಸಮಿತಿ ಶುಕ್ರವಾರ ಸಭೆ ನಡೆಸಿದ್ದು, ರೆಪೋ ದರವನ್ನು ಶೇಕಡ 4ರ ದರದಲ್ಲಿ ಸ್ಥಿರವಾಗಿ ಇಡುವುದಕ್ಕೆ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಇದಲ್ಲದೆ, ಹಣದುಬ್ಬರ ಮುನ್ನೋಟ ಈ ಹಿಂದಿನ ಶೇಕಡ 4.5ರಿಂದ ಶೇಕಡ 5.7ಕ್ಕೆ ಏರಿಸಲಾಗಿದೆ. ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇಕಡ 7.8ರಿಂದ ಶೇಕಡ 7.2ಕ್ಕೆ ಇಳಿಸಲಾಗಿದೆ.
ಸೈಬರ್ ಭದ್ರತೆ ಮಾರ್ಗಸೂಚಿ: ಸೈಬರ್ ರಿಸಿಲಿಯನ್ಸ್ ಆಂಡ್ ಪೇಮೆಂಟ್ ಸೆಕ್ಯುರಿಟಿ ಕಂಟ್ರೋಲ್ ಫಾರ್ ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ ಕುರಿತ ಮಾರ್ಗಸೂಚಿಯನ್ನು ಆರ್ಬಿಐ ಶುಕ್ರವಾರ ಪ್ರಕಟಿಸಿದೆ. ಸೈಬರ್ ವಂಚನೆ ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ.
ಹೋಮ್ ಲೋನ್ ಲಿಂಕ್: ಹೊಸ ಗೃಹ ಸಾಲಗಳಿಗೆ ಲೋನ್-ಟು-ವ್ಯಾಲ್ಯೂ (ಔಖ್ಖ) ಅನುಪಾತಗಳೊಂದಿಗೆ ಮಾತ್ರ ಗೃಹ ಸಾಲಗಳನ್ನು ಲಿಂಕ್ ಮಾಡುವುದನ್ನು 2023 ರ ಮಾರ್ಚ್ 31 ರವರೆಗೆ ಮುಂದುವರಿಸುವುದಾಗಿ ಮತ್ತು ಅಪಾಯದ ತೂಕವನ್ನು ತರ್ಕಬದ್ಧ ಗೊಳಿಸುವುದಾಗಿ ಆರ್ಬಿಐ ಹೇಳಿದೆ. ಈ ಕ್ರಮವು ಈ ಸಾಲಗಳನ್ನು ಅಗ್ಗವಾಗಿಸುವ ನಿರೀಕ್ಷೆ ಇದೆ.
ಪ್ರಮುಖ ಪಾಲಿಸಿ ದರಗಳು ಸ್ಥಿರ: ಸತತ ಹನ್ನೊಂದನೇ ಬಾರಿಗೆ ರೆಪೋ ದರವನ್ನು ಶೇಕಡ 4ರ ದರದಲ್ಲೇ ಸ್ಥಿರವಾಗಿ ಇರಿಸಲಾಗಿದೆ. ಬೆಳವಣಿಗೆಗೆ ಅನುಕೂಲವಾಗುವಂತೆ ಹಣದುಬ್ಬರ ನಿಯಂತ್ರಿಸಲು ರೆಪೊ ದರ ಪರಿಷ್ಕರಣೆಗೆ ಅವಕಾಶ ಇರುವಂತೆಯೂ ನೋಡಿಕೊಳ್ಳಲಾಗಿದೆ. ಲಿಕ್ವಿಡಿಟಿ ಅಡ್ಜಸ್ಟ್ ಮೆಂಟ್ ಫೆಸಿಲಿಟಿ (ಎಲ್ಎಎಫ್) ಕಾರಿಡಾರ್ ಅನ್ನು 50 ಮೂಲಾಂಶಗಳ ನೆಲೆಯಲ್ಲಿ ಪುನಸ್ಥಾಪಿಸಲಾಗಿದೆ. ಹೊಸದಾಗಿ ಸ್ಥಾಪಿಸಲಾದ ಸ್ಟಾ್ಯಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್ಡಿಎಫ್) ಮೂಲಕ ರೆಪೊ ದರ 25 ಮೂಲಾಂಶ ಕಡಿಮೆ ಅಂದರೆ ಶೇಕಡ 3.75 ರ ದರದಲ್ಲಿ ಲಭ್ಯವಾಗಲಿದೆ. ರಿವರ್ಸ್ ರೆಪೋ ದರ ಶೇಕಡ 3.35ರಲ್ಲಿ ಸ್ಥಿರವಾಗಿದೆ.
ಜಿಡಿಪಿ ಮುನ್ನೋಟ ಇಳಿಕೆ: ಪ್ರಸಕ್ತ ಹಣಕಾಸು ವರ್ಷ 2022-23ರ ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇಕಡ 7.8ರಿಂದ ಶೇಕಡ 7.2ಕ್ಕೆ ಇಳಿಸಲಾಗಿದೆ. 2023ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿಯು ಮೊದಲ ತ್ರೖೆಮಾಸಿಕದಲ್ಲಿ ಶೇಕಡ 16.2, ಎರಡನೇಯದರಲ್ಲಿ ಶೇಕಡ 6.2, ಮೂರನೇಯದರಲ್ಲಿ ಶೇಕಡ 4.1 ಮತ್ತು ನಾಲ್ಕನೇಯದರಲ್ಲಿ ಶೇಕಡ 4 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ದರವನ್ನು ನಿಗದಿ ಮಾಡುವಾಗ ಪ್ರಸಕ್ತ ಕಚ್ಚಾತೈಲ ದರ ಪ್ರತಿ ಬ್ಯಾರೆಲ್ಗೆ 100 ಡಾಲರ್ ಎಂದು ಪರಿಗಣಿಸಲಾಗಿದೆ.
ಬಿಬಿಪಿಎಸ್ಗೆ ಉತ್ತೇಜನ: ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ಬಿಬಿಪಿಎಸ್) ಸೌಲಭ್ಯ ಬಳಸುವ ಸಂಸ್ಥೆಗಳ ಅರ್ಹತಾ ಮಾನದಂಡವನ್ನು ಈಗಿರುವ 100 ಕೋಟಿ ರೂ.ನಿಂದ 25 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಈ ಮೂಲಕ ಬಿಬಿಪಿಎಸ್ ವಿಸ್ತರಣೆಗೆ ಉತ್ತೇಜನ ನೀಡಲಾಗಿದೆ.
ಸೆನ್ಸೆಕ್ಸ್ 412 ಅಂಶ ಏರಿಕೆ: ಆರ್ಬಿಐ ನೀತಿ ಪ್ರಕಟವಾಗುತ್ತಿದ್ದಂತೆ ಭಾರತೀಯ ಷೇರುಪೇಟೆಯಲ್ಲಿ ಸಂಚಲನ ಮೂಡಿತು. ಬಿಎಸ್ಇ ಸೆನ್ಸೆಕ್ಸ್ 412.23 ಅಂಶ (0.70%) ಏರಿ 59,447.18 ಅಂಶ, ಎನ್ಎಸ್ಇ ನಿಫ್ಟಿ 144.80 ಅಂಶ (0.82%) ಏರಿ 17,784.35 ಅಂಶ ತಲುಪಿದೆ.