

ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಜ್ಯ ಶಾಖೆ ವತಿಯಿಂದ ನಗರದ ರೆಡ್ ಕ್ರಾಸ್ ಭವನದಲ್ಲಿ ಗುರುವಾರ ‘ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ’ ಅಚರಿಸುವ ಮೂಲಕ ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಕೋವಿಡ್‌ನಂತರ ಕ್ಲಿಷ್ಟ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ 25 ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡರೋಗಿಗಳಿಗೆ ಅಗತ್ಯ ರಕ್ತ ಪೂರೈಸುವಲ್ಲಿ ಯಶಸ್ವಿಯಾಗಿದೆ. ರಕ್ತದಾನ ಮಹಾದಾನ ಹೀಗಾಗಿ ಇದರ ಮಹತ್ವ ಅರಿತು ಜನರೇ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಆರೋಗ್ಯಕರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯ ಪೂರ್ಣ ತಿಳುವಳಿಕೆ ನೀಡಬೇಕು. ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿಯಬೇಕು ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸಭಾಪತಿ ಎಸ್. ನಾಗಣ್ಣ ಮಾತನಾಡಿ, ದೇಶದಲ್ಲಿ ನಿತ್ಯ 135 ಲಕ್ಷ ಯೂನಿಟ್ ರಕ್ತದ ಅಗತ್ಯವಿದೆ. ಆದರೆ ರಕ್ತದಾನ ಇಂದು ಲಾಭದಾಯಕ ಉದ್ದಿಯಾಗುತ್ತಿದೆ. ಹಾಗಾಗಿ ದಾನಿಗಳು ಲಾಭರಹಿತ ಸಂಸ್ಥೆಗಳಿಗೆ ಬದಲಾಗಿ ಸೇವಾಮನೋಭಾವ ಹೊಂದಿರುವ ಸಂಸ್ಥೆಗಳಿಗೆ ರಕ್ತದಾನ ಮಾಡಿ ಬಡವರಿಗೆ ನೆರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಸಹಕರಿಸಿದ 10 ಸ್ವಯಂ ಪ್ರೇರಿತ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಉಪ ಸಮಿತಿಯ ಸದಸ್ಯ ರಾಜೀವ್ ಚಂದ್ರಶೇಖರ್, ರೆಡ್ ಕ್ರಾಸ್ ಸದಸ್ಯರು, ರಕ್ತದಾನಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.