ರೂಪಕಲಾ ನಡೆ ಸತ್ಯ ಶೋಧನೆ ಕಡೆ; ಅರ್ಹ ರೈತರಿಗೆ ಭೂಮಿ ಮಂಜೂರಾತಿಗೆ ಸ್ಥಳ ಪರಿಶೀಲನೆ, ಕೆಜಿಎಫ್ ಶಾಸಕಿ ಜನಸೇವೆಗೆ ಮೆಚ್ಚುಗೆ

15 betamangala 1B
Published on

ಬೇತಮಂಗಲ: ಬಗರ್​ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಳೆದ 25 ವರ್ಷಗಳಿಂದ ಕಾಯುತ್ತಿರುವ ರೈತರಿಗೆ ಅನ್ಯಾಯ ಆಗಬಾರದು ಹಾಗೂ ಅನರ್ಹರಿಗೆ ಸರ್ಕಾರಿ ಸೌಲಭ್ಯ ಸಿಗಬಾರದು ಎಂಬ ಉದ್ದೇಶದಿಂದ ಸಭೆಯಲ್ಲೇ ತೀರ್ಮಾನ ಕೈಗೊಳ್ಳುವ ಪರಂಪರೆಯನ್ನು ಕೈಬಿಟ್ಟು ಸ್ಥಳ ಪರಿಶೀಲಿಸಿ ಸತ್ಯಶೋಧನೆ ನಡೆಸುವತ್ತ ಕೆಜಿಎಫ್ ತಾಲೂಕು ಬಗರ್​ ಹುಕುಂ ಸಾಗುವಳಿ ಸಮಿತಿಯ ಅಧ್ಯೆ ಹಾಗೂ ಶಾಸಕಿ ಎಂ.ರೂಪಕಲಾ ಹೆಜ್ಜೆಯಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಬಾರ್ಲಿ ಗ್ರಾಮದಲ್ಲಿನ ಫಲಾನುಭವಿ ರೈತರ ಭೂಮಿಗೆ ಎಂ.ರೂಪಕಲಾ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾಮಾನ್ಯವಾಗಿ ದರಕಾಸ್ತು ಸಮಿತಿಯ ಮುಂದೆ ಬರುವ ಕಡತಗಳನ್ನು ಪರಿಶೀಲಿಸಿ ಸಭೆಯಲ್ಲೆ ತೀರ್ಮಾನ ತೆಗೆದುಕೊಳ್ಳುವುದು ಇದುವರೆಗೂ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ ಇದೇ ಮೊದಲ ಬಾರಿಗೆ ಅರ್ಜಿದಾರರ ಸಮ್ಮುಖದಲ್ಲಿ ಅವರು ಸಾಗುವಳಿ ಮಾಡುತ್ತಿರುವ ಜಮೀನನ್ನು ಪರಿಶೀಲಿಸಲು ಶಾಸಕಿ ಮುಂದಾಗಿದ್ದು, ಆಯ್ಕೆಯಾಗಿರುವ ಪ್ರತಿ ರೈತನ ಭೂಮಿಗೆ ಭೇಟಿ ನೀಡಿ, ರೈತರ ಸಮಸ್ಯೆ, ವಾಸ್ತವ ಸ್ಥಿತಿಗತಿ, ಇತರೆಡೆ ಲಾನುಭವಿಗಳಿಗೆ ಜಮೀನು ಇದೆಯಾ ಹಾಗೂ ಅಧಿಕಾರಿಗಳು ಅವ್ಯವಹಾರ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, 25 ವರ್ಷಗಳಿಂದ ಚಾತಕ ಪಯಂತೆ ಕಾಯುತ್ತಿರುವ ರೈತನಿಗೆ ಭೂಮಿ ಮಂಜೂರು ಮಾಡುವ ಮೂಲಕ ಪಾರದರ್ಶಕವಾಗಿ ಸಾಗುವಳಿ ಚೀಟಿ ನೀಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ.

ಏನೇನಾಗಿತ್ತು?: 1998ರಲ್ಲಿ ಸಲ್ಲಿಸಿರುವ ರೈತರ ಕಡತಗಳು ಬಾಕಿ ಉಳಿದಿದ್ದವು. 2 ವರ್ಷಗಳ ಹಿಂದೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಸಂಖ್ಯೆ ಬರೋಬ್ಬರಿ 3 ಸಾವಿರಕ್ಕೂ ಅಧಿಕವಾಗಿದೆ. 1998ರಲ್ಲಿ ಸರ್ಕಾರದ ಆದೇಶದಂತೆ ನಮೂನೆ 53 ರಲ್ಲಿ ಸರ್ಕಾರಿ ಭೂಮಿಗಳಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ಅವಿಭಜಿತ ಬಂಗಾರಪೇಟೆ ತಾಲೂಕಿನಲ್ಲಿ ಸುಮಾರು 800 ರೈತರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 200 ಮಂದಿಗೆ ಮಾತ್ರ ಭೂಮಿ ಮಂಜೂರು ಮಾಡಲಾಗಿತ್ತು. 25 ವರ್ಷಗಳಿಂದ ಸಾಕಷ್ಟು ಸಲ ದರಕಾಸ್ತು ಸಮಿತಿ ಸಭೆಗಳು ನಡೆದಿತ್ತಾದರೂ ಯಾವ ಶಾಸಕರೂ ರೈತರಿಗೆ ಭೂಮಿ ಮಂಜೂರು ಮಾಡುವ ಮನಸ್ಸು ಮಾಡಿರಲಿಲ್ಲ. ಈ ಮಧ್ಯೆ ಕಂದಾಯ ಇಲಾಖೆ ಅಧಿಕಾರಿಗಳು ಸಾಕಷ್ಟು ಅವ್ಯವಹಾರ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಇದೆ. ಸಮಿತಿಯು ಈಗ 25 ವರ್ಷಗಳಿಂದ ಕಾಯುತ್ತಿರುವ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ಮುಂದಾಗಿದೆ.

ಬಂಗಾರಪೇಟೆಯಿಂದ ಕೆಜಿಎಫ್​ ತಾಲೂಕು ಪ್ರತ್ಯೇಕಗೊಂಡ ನಂತರ ಶಾಸಕಿ ರಾಮಕ್ಕನವರ ಅಧ್ಯಕ್ಷತೆಯಲ್ಲಿ ಸಾಗುವಳಿ ಸಮಿತಿ ಸಭೆ ನಡೆದಿತ್ತು. ಆದರೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಆರು ತಿಂಗಳಿಂದೀಚೆಗೆ ಎಂ.ರೂಪಕಲಾ ನೇತೃತ್ವದ ದರಕಾಸ್ತು ಸಮಿತಿ ಹಲವು ಬಾರಿ ಸಭೆ ನಡೆಸಿದೆ. ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲು ನಿರ್ಧರಿಸಿದ್ದು, ಅಕ್ರಮವಾಗಿ ಭೂಮಿ ಕಬಳಿಸಲು ಹೊಂಚು ಹಾಕುತ್ತಿರುವವರಿಗೆ ಭೂಮಿ ಸಿಗದಂತೆ ನೋಡಿಕೊಳ್ಳಬೇಕು ಎಂಬ ಶಾಸಕಿ ನಿಲುವು ಈಗ ಸತ್ಯ ಶೋಧನೆ ಕಡೆ ಸಾಗಿದೆ. ಶಾಸಕಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ವರದಿ ಪ್ರಕಟಿಸಿತ್ತು: ನಾಲ್ಕು ವರ್ಷಗಳ ಹಿಂದೆ 40 ಅನರ್ಹ ಫಲಾನುಭವಿಗಳಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಕ್ರಮ ವ್ಯವಹಾರ, ವಂಚನೆ ಕುರಿತು ವಿಜಯವಾಣಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತಕೊಂಡಿದ್ದ ಹಿರಿಯ ಅಧಿಕಾರಿಗಳು 40 ಕಡತಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಅಕ್ರಮಕ್ಕೆ ಕಡಿವಾಣ ಹಾಕಿದ್ದರು.

25 ವರ್ಷಗಳಿಂದ ಕಾಯುತ್ತಿರುವ ರೈತನಿಗೆ ಅನ್ಯಾಯವಾಗಬಾರದು. ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ದೇಶದ ಬೆನ್ನೆಲುಬಾಗಿರುವ ರೈತನಿಗೆ ನನ್ನ ಅಧಿಕಾರ ಅವಧಿಯಲ್ಲಿ ಸಣ್ಣ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ಸಂತಸತಂದಿದೆ. |ಎಂ.ರೂಪಕಲಾ, ಶಾಸಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net