

ಬೇಲೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ರುದ್ರಭೂಮಿ ಜಾಗವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಸಬಾ ‘ಎ’ ಹೋಬಳಿ ಘಟಕದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿ ತಹಸೀಲ್ದಾರ್ ರಮೇಶ್‌ಗೆ ಮನವಿ ಪತ್ರ ಸಲ್ಲಿಸಿದರು.
ಬೇಲೂರು ತಾಲೂಕಿನ 37 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಕೆಲವೆಡೆ ಭೂಮಿ ಕಾಯ್ದಿರಿಸಿದರೆ ಮತ್ತೆ ಕೆಲವೆಡೆ ಭೂಮಿಯೇ ಇಲ್ಲ. ಇರುವ ಭೂಮಿಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡರೆ ಮತ್ತೆ ಕೆಲವರು ಬಗರ್ ಹುಕುಂ ಯೋಜನೆಯಲ್ಲಿ ಸಾಗುವಳಿ ಪಡೆದಿದ್ದಾರೆ. ಸರ್ಕಾರದ ಸುತ್ತೋಲೆಯಂತೆ ಪ್ರತಿ ಗ್ರಾಮಕ್ಕೂ ರುದ್ರಭೂಮಿಗೆ ಜಾಗ ಕಾಯ್ದಿರಿಸಬೇಕು. ಆದರೆ, ಬೇಲೂರಿನಲ್ಲಿ ಎಲ್ಲೂ ಆ ರೀತಿಯಾಗಿಲ್ಲ. ಇಲ್ಲಿನ ಅಧಿಕಾರಿಗಳ ವಿಫಲತೆಯಿಂದ ಬಡವರು ನೊಂದವರು ಹೆಣ ಹೂಳಲು ಪರದಾಡುವಂತಾಗಿದೆ. ಆದ್ದರಿಂದ ತಾಲೂಕು ಆಡಳಿತ ಮತ್ತು ತಹಸೀಲ್ದಾರ್ ಒಂದು ತಿಂಗಳೊಳಗೆ ರುದ್ರಭೂಮಿಗಳನ್ನು ಬಿಡಿಸಿ ಕೊಡುವುದಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರಮೇಶ್, ತಾಲೂಕಿನ ಎಲ್ಲ ಗ್ರಾಮಗಳಲ್ಲೂ ರುದ್ರಭೂಮಿಗೆ ಜಾಗ ಮೀಸಲಾಗಿದೆ. ಆದರೆ, ಅದನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಅವುಗಳನ್ನು ಒಂದೊಂದಾಗಿ ತೆರವುಗೊಳಿಸುವುದಕ್ಕೆ ಮುಂದಾಗಿದ್ದೇವೆ. ತೆರವಾಗಿರುವ ಜಾಗವನ್ನು ಗ್ರಾಮ ಪಂಚಾಯಿತಿಗೆ ವಹಿಸಿದ್ದೇವೆ. ಅತೀ ಶೀಘ್ರದಲ್ಲೇ ಉಳಿದವುಗಳ ತೆರವಿಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಾತನಾಡಿದರು. ಕಾಂಗ್ರೆಸ್ ಕಸಬಾ ಎ ಹೋಬಳಿ ಕಾರ್ಯದರ್ಶಿ ಮಲ್ಲೇಶ್, ಯುವ ಕಾಂಗ್ರೇಸ್ ಮುಖಂಡರಾದ ಮಂಜುನಾಥ್, ಸಚಿನ್, ಲೋಕೇಶ್, ಮನ್ಸೂರ್ ಅಹಮದ್, ಅಶೋಕ್, ರವಿ, ಅಜಯ್ ಕುಮಾರ್, ಮಹೇಶ್, ಮನು ಸೇರಿದಂತೆ ಇತರರಿದ್ದರು.