ರಿಂಗ್ ರೋಡ್ ನಿರ್ಮಾಣಕ್ಕೆ ವಿರೋಧ

010101
Published on

ಬೆಳಗಾವಿ: ನಗರದ ಹೊರವಲಯದಲ್ಲಿ ಕೈಗೊಂಡಿರುವ ‘ಹಲಗಾ-ಮಚ್ಛೆ ವರ್ತುಲ ರಸ್ತೆ (ರಿಂಗ್ ರೋಡ್)’ ಯೋಜನೆ ಕಾಮಗಾರಿಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿಯೇ ಯುವ ರೈತನೋರ್ವ ಗುರುವಾರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಳಗಾವಿ ತಾಲೂಕಿನ ಹಲಗಾ ಮತ್ತು ಮಚ್ಛೆ ಗ್ರಾಮದ ಮಧ್ಯೆ 9.5 ಕಿ.ಮೀ. ರಿಂಗ್ ರೋಡ್ ನಿರ್ಮಾಣಕ್ಕಾಗಿ 110 ಎಕರೆ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ಆದರೆ, ಮಚ್ಛೆ ಗ್ರಾಮದ ಕೆಲ ರೈತರು ಭೂಮಿ ಬಿಟ್ಟುಕೊಟ್ಟಿಲ್ಲ. ಅಲ್ಲದೆ, ಈ ಜಮೀನಿನಲ್ಲಿಯೇ ರೈತರು 2 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅಧಿಕಾರಿಗಳು, ಗುತ್ತಿಗೆದಾರರು ಗುರುವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ಜಮೀನಿನಲ್ಲಿ ಬೆಳೆದು ನಿಂತಿರುವ ಕಬ್ಬು ಬೆಳೆ ನಾಶಪಡಿಸಿ ಕಾಮಗಾರಿ ಕೈಗೊಂಡಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದರು.

ಪ್ರತಿರೋಧದ ಮಧ್ಯೆಯೂ ಕಾಮಗಾರಿ ಮುಂದುವರಿಸಿದ್ದಕ್ಕೆ ಜಮೀನು ಮಾಲೀಕ ಆಕಾಶ ಅನಗೋಳಕರ ಎಂಬವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಮಗಾರಿ ವಿರೋಧಿಸಿ ರೊಚ್ಚಿಗೆದ್ದ ರೈತರು, ಪೊಲೀಸರೊಂದಿಗೆ ವಾಗ್ದಾಳಿ ನಡೆಸಿದರು. ಈ ವೇಳೆ ಪೊಲೀಸರು 25ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದರು. ಇಲ್ಲಿಯವರೆಗೆ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿಯೇ ಕಾಮಗಾರಿ ಆರಂಭಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net