

ಸಾಲಿಗ್ರಾಮ: ಜಾನುವಾರುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಚುಂಚನಕಟ್ಟೆ ರಾಸುಗಳ ಜಾತ್ರೆ ನಿಷೇಧಿಸಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಚುಂಚನಕಟ್ಟೆಯಲ್ಲಿ ಗುರುವಾರ ಜಾತ್ರೆ ಸಂಬಂಧ ರೈತರೊಂದಿಗೆ ಮಾತನಾಡಿದ ಅವರು, ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಚರ್ಮಗಂಟು ರೋಗಕ್ಕೆ ಮುಂದಾಗಿದ್ದು, ಈ ಕ್ರಮ ಕೈಗೊಂಡಿದೆ. ರಾಜ್ಯದಲ್ಲೆಡೆ ಜಾನುವಾರು ಜಾತ್ರೆಗಳನ್ನು ನಿಷೇಧಿಸಲಾಗಿದೆ. ರೈತರು ಮತ್ತು ಜಾನುವಾರುಗಳ ಮಾರಾಟಗಾರರು ಸಹಕರಿಸಬೇಕು ಎಂದರು.
ಸ್ಥಳದಲ್ಲಿದ್ದ ರೈತರು ಜಾನುವಾರು ಜಾತ್ರೆ ನಡೆಸಿಕೊಡುವಂತೆ ಶಾಸಕರನ್ನು ಒತ್ತಾಯಿಸಿದರು. ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಜಾತ್ರೆ ಕಟ್ಟುತ್ತಿದೆ. ಅದರಂತೆ ನಮಗೂ ಅನುಮತಿ ಕೊಡಿಸಿ ಎಂದು ಕೋರಿದರು. ಕೂಡಲೇ ಶಾಸಕ ಬಾಲಕೃಷ್ಣ ಅವರಿಗೆ ಕರೆ ಮಾಡಿದರು. ಆಗ ಬಾಲಕೃಷ್ಣ ಅವರು ಸರ್ಕಾರದ ಆದೇಶದಂತೆ ಜಾನುವಾರುಗಳ ಜಾತ್ರೆ ನಡೆಸುತ್ತಿಲ್ಲ ಎಂದು ಹೇಳಿದರು. ನಂತರ ರೈತರೊಂದಿಗೆ ಸಾ.ರಾ.ಮಹೇಶ್ ಮಾತನಾಡಿ, ರಾಜ್ಯದ ಯಾವುದೇ ಸ್ಥಳದಲ್ಲಿ ಜಾನುವಾರುಗಳ ಜಾತ್ರೆ ನಡೆದರೆ ತಿಳಿಸಿ, ಚುಂಚನಕಟ್ಟೆಯಲ್ಲಿ ಜಾತ್ರೆಗೆ ಅನುಮತಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಕೇವಲ ಮೂರು ದಿನವಾದರೂ ಅವಕಾಶ ಮಾಡಿಕೊಡಿ ಎಂದು ರೈತರು ಮನವಿ ಮಾಡಿದರು. ಆದರೆ, ಶಾಸಕರು ಸಾಧ್ಯವಿಲ್ಲ ಎಂದು ಹೇಳಿದರು.
ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಮಿರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನೇತ್ರ, ಸಾಲಿಗ್ರಾಮ ಇನ್ಸ್‌ಪೆಕ್ಟರ್ ಶ್ರೀಕಾಂತ್, ಸಬ್‌ಇನ್ಸ್‌ಪೆಕ್ಟರ್ ಕುಮುದಾ, ನೀರಾವರಿ ಇಲಾಖೆ ಎಇಇ ಈರಣ್ಣ, ಉಪ ತಹಸೀಲ್ದಾರ್ ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾ ಕೋಟೆಗೌಡ, ರೇಖಾ ಇದ್ದರು.