

ಬನ್ನಿಕುಪ್ಪೆ: ಸಾಂಪ್ರದಾಯಿಕ ಕೃಷಿಯಿಂದ ಇಂದು ರೈತರು ವೈಜ್ಞಾನಿಕ ಕೃಷಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಆದರೂ ಅತಿಯಾದ ರಾಸಾಯನಿಕಗಳ ಬಳಕೆಯಿಂದ ವಾತಾವರಣದ ಮೇಲಷ್ಟೇ ಅಲ್ಲದೆ, ಮನುಷ್ಯನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರಲಿದೆ ಎಂಬುದನ್ನು ರೈತರು ಅರಿಯಬೇಕು ಎಂದು ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಮಹೇಶ್ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮೈಸೂರು ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಮೈಸೂರು ಬೈಫ್ ಸುಸ್ಥಿರ ಜೀವನಾಧಾರ ಹಾಗೂ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹುಣಸೂರು ತಾಲೂಕಿನ ಹಳೇಬೀಡು ಗ್ರಾಮದಲ್ಲಿ ಗುರುವಾರ ರೈತರಿಗಾಗಿ ಆಯೋಜಿಸಿದ್ದ ‘ತರಕಾರಿ ಮತ್ತು ಶುಂಠಿ ಬೆಳೆಗಳಲ್ಲಿ ನಿಖರ ಬೇಸಾಯ ತಾಂತ್ರಿಕತೆಗಳು’ ವಿಷಯ ಕುರಿತ ಒಂದು ದಿನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸುವ ತರಬೇತಿಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ ಮಾತನಾಡಿ, ಸಾವಯವ ಗೊಬ್ಬರವನ್ನು ರೈತರು ಹಂತ ಹಂತವಾಗಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮಣ್ಣಿನ ಆರೋಗ್ಯವನ್ನೂ ಕಾಪಾಡಬಹುದು. ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ವೃದ್ಧಿಸುವಲ್ಲಿ ದ್ರವರೂಪದ ಗೊಬ್ಬರಗಳು, ಕೊಟ್ಟಿಗೆ ಗೊಬ್ಬರ ಹಾಗೂ ಎರೆಹುಳು ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ರೈತರು ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ, ಪರೀಕ್ಷೆಯ ವರದಿಯ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸಬೇಕು ಎಂದು ಕರೆ ನೀಡಿದರು.
ತೋಟಗಾರಿಕೆ ವಿವಿಯ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್ ಮಾತನಾಡಿ, ತರಕಾರಿ ಹಾಗೂ ಶುಂಠಿ ಬೆಳೆಗಳಲ್ಲಿ ಅನುಸರಿಸಬೇಕಾದ ನಿಖರ ಬೇಸಾಯ ತಾಂತ್ರಿಕತೆಗಳು, ಹಸಿರೆಲೆ ಗೊಬ್ಬರಗಳ ಬಳಕೆ, ಕೊಟ್ಟಿಗೆ ಗೊಬ್ಬರವನ್ನು ಜೈವಿಕ ಪೀಡೆನಾಶಕಗಳಿಂದ ಪುಷ್ಟೀಕರಣದ ವಿಧಾನ ಮತ್ತು ಬಳಕೆ, ಪ್ಲಾಸ್ಟಿಕ್ ಹೊದಿಕೆಯಿಂದಾಗುವ ಅನುಕೂಲಗಳು, ರಸಗೊಬ್ಬರಗಳ ಬಳಕೆ, ರೋಗ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ ತಳಿಗಳು, ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವಾದ ತರಕಾರಿ ಮತ್ತು ಶುಂಠಿ ಬಳಕೆಯ ಬಗ್ಗೆ ವಿವರಿಸಿದರು.
ಸಸ್ಯ ಸಂರಕ್ಷಣೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಆರ್. ಎನ್.ಪುಷ್ಪಾ ಮಾತನಾಡಿ, ಟೊಮ್ಯಾಟೋ, ಮೆಣಸಿನಕಾಯಿ ಬೆಳೆಗಳಲ್ಲಿ ಕಂಡು ಬರುವ ಪ್ರಮುಖ ರೋಗಗಳು ಮತ್ತು ಅವುಗಳ ನಿರ್ವಹಣಾ ಕ್ರಮಗಳು ಹಾಗೂ ಶುಂಠಿ ಬೆಳೆಗೆ ಮಾರಕವಾಗಿರುವ ಗಡ್ಡೆ ಕೊಳೆರೋಗದ ನಿರ್ವಹಣಾ ಕ್ರಮಗಳು, ಗಡ್ಡೆಗಳ ಉಪಚಾರದ ಬಗ್ಗೆ ತಿಳಿಸಿದರು.
ಹಳೇಬೀಡು ಗ್ರಾಮದ ಮಹದೇಶ್ವರ ಗ್ರಾಮ ಜಲನಯನ ಸಮಿತಿ ಅಧ್ಯಕ್ಷ ಸತೀಶ್ ಎಸ್. ಹಾಗೂ ಗ್ರಾಮದಲ್ಲಿ ಪರಿಕರಗಳ ವರ್ತಕರಾದ ಮರಿಸಿದ್ದ ನಾಯಕ, ಹುಣಸೂರು ಕ್ಷೇತ್ರ ಸಹಾಯಕ ಧರಣೇಶ್, ಬೈಫ್ ಸಂಸ್ಥೆಯ ಯೋಜನಾ ಅಭಿಯಂತರ ಅಂಕುಶ್ ಇತರರು ಹಾಜರಿದ್ದರು.