ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಸಾಮೂಹಿಕ ನಾಯಕತ್ವ ರೈತ ಸಂಘಟನೆಯ ಕಾರ್ಯಕರ್ತರು ಸೋಮವಾರ ನಂಜನಗೂಡಿನಲ್ಲಿ ಹೆದ್ದಾರಿಯಲ್ಲಿ ರಸ್ತೆ ತಡೆ ಮೂಲಕ ಪ್ರತಿಭಟಿಸಿದರು.
11NGD1
Published on

ನಂಜನಗೂಡು: ರಾಜ್ಯದಲ್ಲಿ ಬರದ ಪರಿಸ್ಥಿತಿಯಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು ಇದರಿಂದಾಗಿ ರೈತರು ಬೆಳೆದು ನಿಂತಿರುವ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣ ನೀರು ನಿಲುಗಡೆಗೊಳಿಸಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘಟನೆಯ ಕಾರ್ಯಕರ್ತರು ಸೋಮವಾರ ರಾಷ್ಟ್ರೀಯ ಹೆದ್ದಾರಿ 766 ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಬೆಳಗ್ಗೆ 11ರ ಸಮಯದಲ್ಲಿ ಪ್ರತಿಭಟನಾನಿರತ ರೈತರು ಕಪಿಲಾ ನದಿಗೆ ಇಳಿದು ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರು ತಡೆ ಹಿಡಿಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ದೇವರಾಜ ಅರಸ್ ಸೇತುವೆ ಬಳಿ ಧರಣಿ ನಡೆಸುವ ಮೂಲಕ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಕೇಂದ್ರ ಸರಕಾರ, ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತಕ್ಕೆ ಧಕ್ಕೆಯಾಗಿದ್ದು, ತಮಿಳುನಾಡು ಪರ ಸಹಾನುಭೂತಿ ಹೊಂದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬರದ ಸಮಯದಲ್ಲೂ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡುತ್ತಿರುವುದು ದುರದೃಷ್ಟಕರ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಬೆಳೆಗಳು ಒಣಗುತ್ತಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಹಿತವನ್ನು ಕಾಪಾಡುವ ಸಲುವಾಗಿ ತಕ್ಷಣ ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಗಳನ್ನು ಪರಿಹಾರವನ್ನಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಅರ್ಧ ಗಂಟೆಗೂ ಹೆಚ್ಚು ಸಮಯ ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ನೂರಾರು ವಾಹನಗಳು ರಸ್ತೆಯಲ್ಲಿಯೇ ಸಾಲುಗಟ್ಟಿ ನಿಲ್ಲಬೇಕಾಯಿತು. ಬಳಿಕ ಸ್ಥಳದಲ್ಲಿದ್ದ ಸಂಚಾರ ಠಾಣೆ ಪೊಲೀಸರು ರೈತರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಮನವಿ ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹಿಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್ ರಾವ್, ಶಿವಣ್ಣ, ವೆಂಕಟೇಗೌಡ, ಮಂಜುನಾಥ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net