

ಕಲಬುರಗಿ: ಬಹುದಿನದಿಂದ ಬಾಕಿ ಉಳಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಮಾ.೯ರಂದು ಜಿಲ್ಲೆಯ ಎಲ್ಲ ಕೋರ್ಟ್ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ನಾಗಶ್ರೀ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಿಚಾರಣೆ ಹಂತದಲ್ಲಿರಿವು, ಇತ್ಯರ್ಥವಾಗಬಹುದಾದ ಪ್ರಕರಣಗಳನ್ನು ಅದಾಲತ್‌ನಲ್ಲಿ ಉಭಯ ಕಕ್ಷಿದಾರರ ಒಪ್ಪಿಗೆಯೊಂದಿಗೆ ಇತ್ಯರ್ಥಪಡಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತಿ-ಪತ್ನಿ ಮಧ್ಯೆ ಏರ್ಪಟ್ಟಿರುವ ವ್ಯಾಜ್ಯ, ವಿಚ್ಛೇದನಾ ಪ್ರಕರಣ, ಮೋಟಾರು ಅಪಘಾತ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಆಸ್ತಿ ವಿವಾದ, ಭೂಸ್ವಾಧೀನ ಪ್ರಕರಣ, ವಿದ್ಯುತ್ ಮತ್ತು ನೀರಿನ ಶುಲ್ಕ ಪಾವತಿ ಬಾಕಿ ಪ್ರಕರಣ, ಬ್ಯಾಂಕ್ ಸಾಲ ಪ್ರಕರಣ ಸೇರಿ ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದ ಪ್ರಕರಣ ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.
ಜಿಲ್ಲೆಯ ನ್ಯಾಯಾಲಯಗಳಲ್ಲಿ ೫೦ ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹೊರೆ ಕಡಿಮೆ ಮಾಡಲು ಲೋಕ ಅದಾಲತ್ ಸಹಾಯಕ್ಕೆ ಬರಲಿದೆ. ಕಕ್ಷಿದಾರರ ಹಣ ಮತ್ತು ಸಮಯ ಉಳಿತಾಯ ಆಗುವುದರಿಂದ ಸಾರ್ವಜನಿಕರು ಲೋಕ ಅದಾಲತ್ ಲಾಭ ಪಡೆಯಬೇಕು ಎಂದರು.
೨೦೨೩ರ ಡಿಸೆಂಬರ್‌ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು ಪ್ರಕರಣ ೩೬,೧೪೨ ಪ್ರಕರಣ ವಿಚಾರಣೆಗೆ ಬಂದಿದ್ದು, ಅದರಲ್ಲಿ ೩೧,೧೫೫ ಪ್ರಕರಣ ಇತ್ಯರ್ಥವಾಗಿವೆ. ಪ್ರಸಕ್ತ ೪೦ ಸಾವಿರಕ್ಕೂ ಅಧಿಕ ಪ್ರಕರಣ ಬರುವ ನಿರೀಕ್ಷೆ ಇದೆ ಎಂದರು.
ಹಿರಿಯ ನ್ಯಾಯಾಧೀಶರು ಹಾಗೂ ಜಿ¯್ಲÁ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಇದ್ದರು.