ರಾಷ್ಟ್ರಪತಿಗೆ ಅಗೌರವಿಸಿದ ಸೋನಿಯಾಗಾಂಧಿ ಕ್ಷಮೆಯಾಚಿಸಲಿ: ಛಲವಾದಿ ಆಗ್ರಹ |Warning to Minister Priyank Kharge

chalavadi narayanaswamy
Published on

ಬೆಂಗಳೂರು: ಎಐಸಿಸಿ ಅಧ್ಯಕ್ಷೆ, ಯುಪಿಎ ಸಂಚಾಲಕರಾಗಿ ಉನ್ನತ ಸ್ಥಾನ ನಿರ್ವಹಿಸಿದ ಸೋನಿಯಾಗಾಂಧಿ ಹಿರಿತನಕ್ಕೆ ತಕ್ಕಂತೆ ಮಾತನಾಡಿಲ್ಲ. ರಾಷ್ಟ್ರಪತಿ ಬಗ್ಗೆ ಲಘುವಾದ ಪದಗಳನ್ನು ಬಳಸಿ ಅಪಮಾನಿಸಿದ್ದಾರೆ. ರಾಷ್ಟ್ರಪತಿ ಹುದ್ದೆ‌ ಅಲಂಕರಿಸಿದವರು ತಳ ಸಮುದಾಯವರು ಎಂಬ ಕಾರಣಕ್ಕೆ ಹಗುರವಾದ ಹೇಳಿಕೆ ನೀಡಿದಂತಿದೆ. ಕೂಡಲೇ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಬಳಿ ಸೋನಿಯಾಗಾಂಧಿ ಕ್ಷಮೆ ಯಾಚಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿದ್ದಾಗ ಸಮಚಿತ್ತ, ವಿವೇಕಯುತವಾಗಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದರು. ಆದರೆ ದೆಹಲಿಗೆ ಹೋದ ನಂತರ, ಎಐಸಿಸಿ ಅಧ್ಯಕ್ಷರಾದ ಮೇಲೆ ಅವರ ಮಾತುಗಳಲ್ಲಿ ವಿಷವೇ ತುಂಬಿಕೊಂಡಿದೆ. ಕೇಂದ್ರ ಬಜೆಟ್ ನ್ನು ಹಂದಿ ತಿಂದ ಮೇಲೆ ಬೆಕ್ಕು ಹಜ್ ಯಾತ್ರೆಗೆ ಹೋದಂತೆ ಎನ್ನುವ ಮೂಲಕ ಮುಸ್ಲಿಮುರಿಗೆ ಅಪಮಾನಿಸಿದ್ದಾರೆ.

ಇದಕ್ಕೂ ಮುನ್ನ ಮಹಾ ಕುಂಭ ಮೇಳದಲ್ಲಿ ಪುಣ್ಯ ಸ್ನಾನದ ಬಗ್ಗೆ ಅವಹೇಳನ ಮಾಡಿದರು. ಗಂಗೆಯಲ್ಲಿ ಮಿಂದೆದ್ದರೆ ಬಡತನ ಹೋಗಲ್ಲ, ಪಾಪ ಪರಿಹಾರವಾಗಲ್ಲ ಎಂದಿದ್ದಾರೆ. ಯಾರಾದರೂ ಆ ರೀತಿ ಫಲಕ ಹಾಕಿದ್ದರೆ ? ಬಹುಸಂಖ್ಯಾತ ಹಿಂದುಗಳ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಚಟ ಬಿಡಲಿ

ಸಚಿವ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಚಟ ಬಿಡದಿದ್ದರೆ ಕಲಬುರಗಿ ಜನರು ತಿರುಗಿ ಬೀಳಲಿದ್ದಾರೆ. ಹಿಂದುಗಳನ್ನು ಹೀಯಾಳಿಸುವ ಮುನ್ನ ತಾವು ಯಾವ ಧರ್ಮ, ಜಾತಿಗೆ ಸೇರಿದವರು ಎಂದು ಸ್ಪಷ್ಟಪಡಿಸಬೇಕು. ಪರಿಶಿಷ್ಟ ಜಾತಿಗೆ ಮೀಸಲಿರುವ ಕ್ಷೇತ್ರದಿಂದ ಚುನಾಯಿತರಾಗಿದ್ದೀರಿ. ಈಗ ಹಿಂದು ಧರ್ಮದ ಮಾತನಾಡುತ್ತಿರುವ ರೀತಿ ಗಮನಿಸಿದರೆ ತಮ್ಮಲ್ಲಿರುವ ಜಾತಿ ಪ್ರಮಾಣಪತ್ರದ ಬಗ್ಗೆ ಸಂದೇಹ ಉಂಟಾಗುತ್ತದೆ ಎಂದರು.

ಕೂಡಲೇ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಬಹಿರಂಗಪಡಿಸಬೇಕು. ಇಲ್ಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಲಂಗುಲಗಾಮಿಲ್ಲದ ಹೇಳಿಕೆ ನೀಡುವುದಕ್ಕೆ ಹಿಂದುಗಳು ಟೇಕನ್ ಇಟ್ ಗ್ರ್ಯಾಂಟೆಡ್ ಎಂದು ತಿಳಿಯಬಾರದು. ಮನಸೋಇಚ್ಛೆ ಹೇಳಿಕೆ ನೀಡುವ ಚಟ ಬಿಡದಿದ್ದರೆ ಬಹುಸಂಖ್ಯಾತ ಹಿಂದುಗಳು ತಕ್ಮಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆಗಳು, ಮೈಕ್ರೋ ಫೈನಾನ್ಸ್ ಕಂಪನಿಗಳ ಉಪಟಳ ನಿಂತಿಲ್ಲ. ಕಾನೂನು ಮತ್ತಿ ಸುವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಕೇಳಿದರೆ ಬಿಜೆಪಿ ಅವಧಿಯಲ್ಲಿ ಆಗಿಲ್ಲವೆ ? ಎಂದು ಗೃಹ ಸಚಿವ ಪರಮೇಶ್ವರ್ ಮರು ಪ್ರಶ್ನಿಸುತ್ತಾರೆ. ಹಿಂದೆ ಆಗಿರುವ ಕಾರಣಕ್ಕೆ ಈಗ ಆಗಬೇಕು ಎಂದು ಅರ್ಥೈಸಿದ್ದಾರೆ. ಇಲಾಖೆ ಮೇಲೆ ಹಿಡಿತ ಕಳೆದುಕೊಂಡಿರುವುದು ದೃಢವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.

ಎಲ್ಲರಿಗೂ ಅನುಕೂಲ

ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ನಲ್ಲಿ ಎಲ್ಲರಿಗೂ ಅನುಕೂಲ ಕಲ್ಪಿಸಲಾಗಿದೆ. ವಿಕಸಿತ ಭಾರತ ಗುರಿ ಸಾಧನೆಗೆ ಒತ್ತಾಸೆ ನೀಡಿದೆ. ಪರಿಶಿಷ್ಟ ಜಾತಿ, ಪಂಗಡ, ದುರ್ಬಲ ವರ್ಗದವರು, ಮಹಿಳೆಯರು, ಯುವಜನರು ಸೇರಿ ಎಲ್ಲರಿಗೆ ಆದ್ಯತೆ ನೀಡಲಾಗಿದೆ. ನೇರ ತೆರಿಗೆಯಲ್ಲಿ ವಿನಾಯಿತಿಯು ಆರ್ಥಿಕತೆ, ಅಭಿವೃದ್ಧಿಗೆ ಅವಕಾಶ‌ ಕಲ್ಪಿಸಲಿದೆ ಎಂದು ವಿಶ್ಲೇಷಿಸಿದರು‌.

ಒಂದು ಕುಟುಂಬವೆಂದ ಮೇಲೆ ವಿರಸ, ಮನಸ್ತಾಪ ಇದ್ದೇ ಇರುತ್ತವೆ. ಕಾರ್ಯಕರ್ತರ ಆಧಾರಿತ ಬಿಜೆಪಿಯಲ್ಲೂ ಒಂದಿಷ್ಟು ಗೊಂದಲ, ಸಮಸ್ಯೆಗಳಿವೆ. ವರಿಷ್ಠರ ಗಮನಕ್ಕೆ ತರಲಾಗಿದ್ದು, ತ್ವರಿತವಾಗಿ ಬಗೆಹರಿಯಲಿದೆ. ಆಡಳಿತ ಕಾಂಗ್ರೆಸ್ ಪಕ್ಷ ಉರಿಯುವ ಮನೆಯಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಕೈಹಾಕಿದರೆ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net