ರಾಯಚೂರಿನಲ್ಲಿ ತ್ರಿಕೋನ ಕಾದಾಟ

dgdfgdfg
Published on
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯಚೂರು ಜಿಲ್ಲೆಯಲ್ಲಿ ಒಂದೂವರೆ ದಶಕದಿಂದೀಚೆಗೆ ಬಿಜೆಪಿ ಅರಳುವ ಮೂಲಕ ತೀವ್ರ ಸ್ಪರ್ಧೆ ನೀಡಿದೆ. ಜೆಡಿಎಸ್​ಗೆ ಮತದಾರರಿಂದ ಸ್ಪಂದನೆಯಿದ್ದರೂ ಅಸ್ತಿತ್ವಕ್ಕಾಗಿ ಹೆಣಗಾಡಬೇಕಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ನಾಲ್ಕು ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಸಾಮಾನ್ಯಕ್ಕೆ ಮೀಸಲಿರುವ ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಪೈಪೋಟಿಯಿದೆ. ಪ್ರಸ್ತುತ ತಲಾ ಎರಡು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್, ಮೂರು ಕಡೆ ಕಾಂಗ್ರೆಸ್​ನ ಶಾಸಕರಿದ್ದಾರೆ. ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ಗೆಲ್ಲುವ ಅಭ್ಯರ್ಥಿಗಳತ್ತ ಬಿಜೆಪಿ-ಕಾಂಗ್ರೆಸ್ ಗಮನ ಹರಿಸಿವೆ.

|ಶಿವಮೂರ್ತಿ ಹಿರೇಮಠರಾಯಚೂರು

ಕೈ ನಾಯಕರ ತಿಕ್ಕಾಟ ಕಮಲಕ್ಕೆ ಬಲ: ರಾಯಚೂರು ನಗರ ಸಾಮಾನ್ಯ ಕ್ಷೇತ್ರವಾಗಿದ್ದು, ಮೂರೂ ಪಕ್ಷಗಳಲ್ಲಿ ಟಿಕೆಟ್​ಗಾಗಿ ತೀವ್ರ ಸ್ಪರ್ಧೆ ಏರ್ಪಡುತ್ತಿದೆ. 2013ರಲ್ಲಿ ಜೆಡಿಎಸ್​ನಿಂದ ಹಾಗೂ 2018ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ ಎರಡು ಬಾರಿ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ್ ಈಗ ಹ್ಯಾಟ್ರಿಕ್​ಗೆ ಸಿದ್ಧರಾಗಿದ್ದಾರೆ. ಆದರೆ, ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಉತ್ತಮ ಸ್ಪಂದನೆ ಇರದಿರುವುದು ಅವರಿಗೆ ಆತಂಕ ಮೂಡಿಸಿದೆ. ಕ್ಷೇತ್ರ ರಚನೆ ನಂತರ ನಡೆದ ಚುನಾವಣೆಯಲ್ಲಿ ಮುಸ್ಲಿಮರಿಗೆ ಮಣೆ ಹಾಕುತ್ತಾ ಬಂದಿರುವ ಕಾಂಗ್ರೆಸ್, ಈ ಬಾರಿ ಅನ್ಯರಿಗೆ ಟಿಕೆಟ್ ನೀಡುತ್ತಾ ಎಂಬ ಅನುಮಾನಗಳಿವೆ. ಮಾಜಿ ಶಾಸಕ ಸೈಯದ್ ಯಾಸೀನ್ ಮತ್ತೊಮ್ಮೆ ಸ್ಪರ್ಧಿಸುವ ಇಚ್ಛೆಯಲ್ಲಿದ್ದರೂ ಆರೋಗ್ಯ ದೃಷ್ಟಿಯಿಂದ ಟಿಕೆಟ್ ದೊರಕುವ ಸಾಧ್ಯತೆ ಕಡಿಮೆ. ಟಿಕೆಟ್​ಗೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದರೂ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂಬುದರ ಮೇಲೆ ತೀರ್ವನವಾಗಲಿದೆ.
ಬಸನಗೌಡ ದದ್ದಲ್​ಗೆ ಎದುರಾಳಿ ಯಾರು?: ಪ.ಪಂಗಡಕ್ಕೆ ಮೀಸಲಾದ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿನ ಮತದಾರರು ಬಹಳಷ್ಟು ಚುನಾವಣೆಗಳಲ್ಲಿ ಹೊರಗಿನವರಿಗೆ ಮಣೆ ಹಾಕಿದ್ದಾರೆ. ಆದರೆ, ಈ ಬಾರಿ ತೀವ್ರ ಸ್ಪರ್ಧೆ ಸಾಧ್ಯತೆಗಳಿವೆ. ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಮತ್ತೊಮ್ಮೆ ಕಣಕ್ಕಿಳಿಯುವುದು ಖಚಿತವಾಗಿದ್ದು, ಮಾನ್ವಿಗೆ ಹೋಗಲಿದ್ದಾರೆಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಇದರಿಂದಾಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಂಸದ ಬಿ.ವಿ.ನಾಯಕಗೆ ಮನಸ್ಸಿಲ್ಲದಿದ್ದರೂ ದೇವದುರ್ಗ ದಲ್ಲಿ ನಿಲ್ಲಬೇಕಿದೆ. ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸುವ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಓಡಾಟ ನಡೆಸುತ್ತಿದ್ದರೆ. ಆದರೆ, ಪಕ್ಷದಲ್ಲಿಯೇ ಮತ್ತಿಬ್ಬರು ಟಿಕೆಟ್​ಗಾಗಿ ಪ್ರಯತ್ನಿಸುತ್ತಿರುವುದು ನುಂಗಲಾರದ ತುತ್ತಾಗಿದೆ. ಜೆಡಿಎಸ್​ನಿಂದ ರವಿ ಪಾಟೀಲ್ ಮತ್ತೊಮ್ಮೆ ಸ್ಪರ್ಧಿಸಲಿದ್ದು, ಮತ್ತಷ್ಟು ಓಡಾಟ ನಡೆಸಬೇಕಿದೆ.

ಜಿಲ್ಲೆಯ ಹೈಲೈಟ್ಸ್

  1.   ಕಳೆದ ಬಾರಿ ಇನ್ನೂ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿದ್ದರೂ ಕಾಂಗ್ರೆಸ್ ಮುಖಂಡರಲ್ಲಿನ ಭಿನ್ನಾಭಿಪ್ರಾಯಗಳು ಸೋಲಿಗೆ ಕಾರಣವಾದವು. ರಾಯಚೂರು ನಗರ ಮತ್ತು ಸಿಂಧನೂರಿನಲ್ಲಿ ಕಾಂಗ್ರೆಸ್​ನಲ್ಲಿರುವ ಗುಂಪುಗಾರಿಕೆ ಈ ಸಲದ ಚುನಾವಣೆ ಮೇಲೆ ಪರಿಣಾಮಗಳಾಗುವ ಸಾಧ್ಯತೆ ಗಳಿವೆ. ಮಾನ್ವಿ-ದೇವದುರ್ಗದಲ್ಲಿ ಸಮರ್ಥ ಅಭ್ಯರ್ಥಿ ಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುವ ಪರಿಸ್ಥಿತಿಯಿದೆ.
  2.  ಜಿಲ್ಲೆಯ ಎರಡು ಕಡೆ ಜೆಡಿಎಸ್ ಶಾಸಕರಿದ್ದು, ಈ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಇತರ ಕ್ಷೇತ್ರಗಳಲ್ಲೂ ಪಕ್ಷಕ್ಕಾಗಿ ಶ್ರಮಿಸಿದವರನ್ನು ಕೈಬಿಟ್ಟು, ಅಂತಿಮ ಕ್ಷಣದಲ್ಲಿ ಇತರರಿಗೆ ಟಿಕೆಟ್ ಕೊಡುತ್ತಾ ಬರಲಾಗಿದೆ. ಹೀಗಾಗಿ ಟಿಕೆಟ್ ಘೊಷಣೆ ನಂತರವೇ ಮೈದಾನದಲ್ಲಿ ಇಳಿಯೋಣ ಎಂದು ಪಕ್ಷಕ್ಕಾಗಿ ದುಡಿದವರು ನಿರ್ಧರಿಸಿದಂತಿದೆ.
  3.   ಬಿಜೆಪಿಗೆ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶಗಳಿದ್ದರೂ ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳವತ್ತ ಗಮನ ಹರಿಸಬೇಕಿದೆ. ಮಾನ್ವಿ-ಸಿಂಧನೂರಿನಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ನಾಯಿಕರು ಹುಡುಕಾಟ ನಡೆಸಿದ್ದಾರೆ. ಕನಿಷ್ಠ ನಾಲ್ಕು ಕ್ಷೇತ್ರದಲ್ಲಾರೂ ಕಮಲ ಅರಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿವೆ.
ಸಿಂಧನೂರಿನಲ್ಲಿ ಟಿಕೆಟ್ ಜಿಂದಗಿ: ಸಾಮಾನ್ಯ ಕ್ಷೇತ್ರವಾದ ಸಿಂಧನೂರಿನಲ್ಲಿ ಟಿಕೆಟ್​ಗಾಗಿ ಮೂರೂ ಪಕ್ಷಗಳಲ್ಲಿ ತೀವ್ರ ಪೈಪೋಟಿಯಿದೆ. ಇಲ್ಲಿ ಜಾತಿ ಸಮೀಕರಣವೇ ಪ್ರಧಾನ. ಕ್ಷೇತ್ರದಲ್ಲಿ ಹಿಂದುಳಿದವರು ಮತ್ತು ಮುಂದುವರಿದವರು ಎನ್ನುವ ಅಂಶಗಳು ಗೆಲುವಿಗೆ ಕಾರಣವಾಗಲಿವೆ. ಜೆಡಿಎಸ್ ಶಾಸಕ ವೆಂಕಟರಾವ ನಾಡಗೌಡ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದ್ದರೂ ಬಿಜೆಪಿಗೆ ವಲಸೆ ಹೋಗಲಿದ್ದಾರೆಂಬ ಮಾತುಗಳೂ ಇವೆ. ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದ ಬಿಜೆಪಿಗೆ ನಾಡಗೌಡ ಬಂದರೆ ಅನುಕೂಲವಿದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಹಂಪನಗೌಡ ಬಾರ್ದಲಿ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದರೂ ಸಂಬಂಧಿ ಬಸನಗೌಡ ಬಾರ್ದಲಿಯೂ ಆಕಾಂಕ್ಷಿ ಆಗಿರುವುದು ಮಗ್ಗಲು ಮುಳ್ಳಾಗಿದೆ. ಕ್ಷೇತ್ರದಲ್ಲಿ ಕುರುಬ ಮತ್ತು ಲಿಂಗಾಯತ ಸಮುದಾಯ ಪ್ರಬಲವಾಗಿದ್ದರೂ, ಆಂಧ್ರ-ಬಾಂಗ್ಲಾ ವಲಸಿಗರ ಮತಗಳು ಪ್ರಮುಖ ಪಾತ್ರ ವಹಿಸಲಿವೆ.
ಹಾಲಿ-ಮಾಜಿಗಳಿಗೆ ಮರು ಆಯ್ಕೆ ಬಯಕೆ: ಪ.ಜಾತಿಗೆ ಮೀಸದ ಲಿಂಗಸುಗೂರು ಕ್ಷೇತ್ರದ ಪ್ರತಿ ಚುನಾವಣೆಯಲ್ಲಿ ಮತದಾರರು ಒಂದೊಂದು ಪಕ್ಷಕ್ಕೆ ಮಣೆ ಹಾಕುತ್ತ ಎಲ್ಲರಿಗೂ ಸಮಾನ ಅವಕಾಶ ನೀಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದ್ದರೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮತ್ತೊಮ್ಮೆ ಸ್ಪರ್ಧೆಗೆ ಇಳಿಯಲಿದ್ದಾರೆ. ಜೆಡಿಎಸ್​ನಿಂದ ಸಿದ್ದು ಬಂಡಿ ಸ್ಪರ್ಧಿಸಲಿದ್ದಾರೆ. ಮಾದಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರ ಸಮುದಾಯದವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರಿಗೆ ಭದ್ರ ಬುನಾದಿ ಒದಗಿಸಿದ್ದ ಈ ಕ್ಷೇತ್ರ ಎಸ್ಸಿಗೆ ಮೀಸಲಾದ ನಂತರದಲ್ಲಿ ಪ್ರಮುಖ ನಾಯಕರು ತೆರೆಮರೆಗೆ ಸರಿಯುವಂತಾಗಿದೆ.
ಯಾರಪ್ಪಾ ಮಾನ್ವಿ ನಾಯಕ?: ಪ.ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಜೆಡಿಎಸ್​ನಿಂದ ಮತ್ತೊಮ್ಮೆ ಸ್ಪರ್ಧೆಗೆ ಇಳಿಯುವುದು ಖಚಿತವಾಗಿದೆ. ಇತ್ತ ಪ್ರಬಲ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್-ಬಿಜೆಪಿ ಹುಡುಕಾಟ ನಡೆಸುತ್ತಿವೆ. ಮಾಜಿ ಶಾಸಕ ಹಂಪಯ್ಯ ನಾಯಕ ಮತ್ತೊಮ್ಮೆ ಕಾಂಗ್ರೆಸ್​ನಿಂದ ಸ್ಪರ್ಧೆಗಿಳಿಯಲು ಸಿದ್ಧರಿದ್ದರೂ ವಯಸ್ಸಿನ ಕಾರಣ ಹೇಳಿ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ. ಕ್ಷೇತ್ರದ ಮೇಲೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಹಿಡಿತ ಹೊಂದಿದ್ದು, ಅವರು ಬೆಂಬಲಿಸುವವರು ಅಭ್ಯರ್ಥಿ ಆಗಲಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ ಸೇರಿ ಹಲವರು ಆಕಾಂಕ್ಷಿಗಳಾಗಿದ್ದರೂ ಗೆಲ್ಲುವಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎನ್ನುವ ನಿಟ್ಟಿನಲ್ಲಿ ವರಿಷ್ಠರು ಪ್ರಯತ್ನ ನಡೆಸಿದ್ದಾರೆ. ಈ ನಡುವೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತಮ್ಮ ಹುಟ್ಟುಹಬ್ಬವನ್ನು ಮಾನ್ವಿಯಲ್ಲಿ ಆಚರಿಸಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಿದ್ದು, ವರಿಷ್ಠರು ಬಯಸಿದರೆ ಇಲ್ಲಿಂದ ಸ್ಪರ್ಧಿಸುವ ಅಭಿಮತ ವ್ಯಕ್ತಪಡಿಸಿದ್ದಾರೆ.
ದೇವದುರ್ಗದಲ್ಲಿ ಸಂಬಂಧಿಕರ ಕದನ: ಪ.ಜಾತಿಗೆ ಮೀಸಲಾಗಿದ್ದ ದೇವದುರ್ಗ ಕ್ಷೇತ್ರ 2008ರಲ್ಲಿ ಪ.ಪಂಗಡಕ್ಕೆ ಬದಲಾದ ನಂತರ ಸಂಬಂಧಿಕರ ನಡುವೆ ಕದನ ನಡೆಯುತ್ತಿದೆ. ಕಾಂಗ್ರೆಸ್ ಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ನಾಲ್ಕು ಬಾರಿ ಕೆ.ಶಿವನಗೌಡ ನಾಯಕ ಶಾಸಕರಾಗಿದ್ದಾರೆ. ಇದೀಗ ಕ್ಷೇತ್ರದಲ್ಲಿ ತನ್ನ ತಾಯಿ ಮಹಾದೇವಮ್ಮರನ್ನು ಸ್ಪರ್ಧೆಗೆ ಇಳಿಸಿ, ಮಾನ್ವಿ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆಂಬ ಮಾತು ಕೇಳಿಬರುತ್ತಿವೆ. ಇತ್ತ ಕಾಂಗ್ರೆಸ್​ನಲ್ಲಿ ಅಭ್ಯರ್ಥಿ ಯಾರೆಂಬುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಗಳಿವೆ. ಮನಸ್ಸಿಲ್ಲದಿದ್ದರೂ ಮಾಜಿ ಸಂಸದ ಬಿ.ವಿ.ನಾಯಕ ಸ್ಪರ್ಧೆಗೆ ಇಳಿಯಬೇಕಿದೆ. ಶಿವನಗೌಡಗೆ ಎದುರಾಳಿಯಾಗಿ ಬಿ.ವಿ.ನಾಯಕರೇ ಸೂಕ್ತವೆಂಬ ಅಭಿಪ್ರಾಯಗಳೂ ಪಕ್ಷದಲ್ಲಿದೆ. ಬಿ.ವಿ.ನಾಯಕರ ಸಹೋದರ ರಾಜಶೇಖರ ನಾಯಕ ಮತ್ತು ಅವರ ಪತ್ನಿ ಶ್ರೀದೇವಿ ನಾಯಕರೂ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಿಂದ ಕರಿಯಮ್ಮ ನಾಯಕ ಕಣಕ್ಕಿಳಿಯುವುದ ಖಚಿತವಾಗಿದ್ದು, ಸಾಕಷ್ಟು ಜನಬೆಂಬಲ ದೊರೆಯುತ್ತಿರುವುದು ಕಾಂಗ್ರೆಸ್-ಬಿಜೆಪಿಗೆ ತಲೆನೋವಾಗಿದೆ.
ಪಕ್ಷಕ್ಕಿಂತ ವ್ಯಕ್ತಿಗೇ ಮಸ್ಕಿ ಮಣೆ: ಪ.ಪಂಗಡಕ್ಕೆ ಮೀಸಲಾದ ಮಸ್ಕಿ ಕ್ಷೇತ್ರ 2008ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೇ ಮಣೆ ಹಾಕುತ್ತಾ ಬಂದಿದ್ದಾರೆ. ಒಂದು ಬಾರಿ ಬಿಜೆಪಿ ಮತ್ತು ಎರಡು ಬಾರಿ ಕಾಂಗ್ರೆಸ್​ನಿಂದ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲರು ಈಗ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. 2018ರಲ್ಲಿ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ ಪ್ರತಾಪಗೌಡ ಪಾಟೀಲರು ಉಪ ಚುನಾವಣೆಯಲ್ಲಿ ಸೋಲುಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ಸೇರಿ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರತಾಪಗೌಡರ ವಿರುದ್ಧ ಸೇಡು ತೀರಿಸಿಕೊಂಡಿದ್ದರು. 5ಎ ಕಾಲುವೆ ವಿಷಯ ಮುಂದಿಟ್ಟು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್​ಗೆ ಮುಂಬರುವ ಚುನಾವಣೆಯಲ್ಲಿ ಇದೇ ವಿಷಯ ಕಗ್ಗಂಟಾಗುವ ಸಾಧ್ಯತೆಗಳಿವೆ. ಕ್ಷೇತ್ರದಲ್ಲಿ ಜೆಡಿಎಸ್​ಗೆ ಹೇಳಿಕೊಳ್ಳುವಂಥ ಪರಿಸ್ಥಿತಿಯಿಲ್ಲದ ಕಾರಣ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆಸಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net