

ಪಂಚನಹಳ್ಳಿ: ರಾಮಾಯಣದ ಮೂಲಕ ಜಗತ್ತಿಗೆ ಜೀವನ ಮೌಲ್ಯಗಳನ್ನು ತಿಳಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ನಾಗರಾಜು ತಿಳಿಸಿದರು.
ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಲ್ಮೀಕಿ ಯಾವುದೇ ಜಾತಿಗೆ ಸೀಮಿತವಾಗಿರದೆ ತನ್ನ ಶ್ರೇಷ್ಠ ಕಾವ್ಯ ರಾಮಾಯಣದ ಮೂಲಕ ಭಾರತದ ಸಂಸ್ಕೃತಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಹಿಂದು ಸಂಸ್ಕೃತಿಯಲ್ಲಿ ರಾಮಾಯಣಕ್ಕೆ ವಿಶೇಷ ಸ್ಥಾನವಿದೆ. ಇದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ತಿಳಿಸಿದರು.
ಶಿಕ್ಷಕ ಕೆ.ಆರ್.ನೀಲಕಂಠಪ್ಪ ಮಾತನಾಡಿ, ಭಾರತದ ಸಂಸ್ಕೃತಿಗೆ ಮಹರ್ಷಿ ವಾಲ್ಮೀಕಿ ವಿಶೇಷ ಕೊಡುಗೆ ನೀಡಿದ್ದಾರೆ. ಇಂದು ಪಾಶ್ಚಾತ್ಯ ರಾಷ್ಟ್ರಗಳು ಸಹ ರಾಮಾಯಣದ ಆದರ್ಶಗಳನ್ನು ಪಾಲಿಸುತ್ತಿವೆ. ಯುವಕರು ರಾಮಾಯಣದ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿದಲ್ಲಿ ಉನ್ನತ ವ್ಯಕ್ತಿಯಾಗಬಹುದು ಎಂದು ತಿಳಿಸಿದರು.
ಕಡೂರು ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ವಾಲ್ಮೀಕಿ ಅವರ ಬದುಕು ಮತ್ತು ಸಾಧನೆ ಪ್ರಸ್ತುತ ಸಮಾಜಕ್ಕೆ ಪ್ರೇರಣೆಯಾಗಿದೆ. ಈ ಸಾಧಕನ ನಿಜ ಜೀವನಗಾಥೆಯ ಅಧ್ಯಯನ ತಳಸಮುದಾಯಗಳ ಕೋಟ್ಯಂತರ ಜನರಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಯೋಗೇಶ್, ಗ್ರಾಮಸ್ಥರಾದ ಕೆ.ಸಿ.ನಂಜುಂಡಪ್ಪ, ಪುಟ್ಟನಾಯ್ಕ, ಶಿವಪ್ಪ, ಪಾಪನಾಯ್ಕ, ರವಿ, ಪರಮೇಶ್, ಪುಟ್ಟಪ್ಪ, ಮಧು, ಕುಮಾರ್, ವಿಜಯ್, ಮಹಾಂತೇಶ್, ದೊಡ್ಡಯ್ಯ, ಮನು, ಸಚಿನ್ ಇದ್ದರು.