ರಾಮಲಿಂಗೇಶ್ವರಸ್ವಾಮಿ ರಥೋತ್ಸವ

IMG_20250227_131325
Published on

ಎಚ್.ಮಟಕೆರೆ ಗ್ರಾಮದಲ್ಲಿ ಅದ್ದೂರಿ ಆಚರಣೆ

ಎಚ್.ಡಿ.ಕೋಟೆ : ತಾಲೂಕಿನ ಕಪಿಲಾ ಹಾಗೂ ತಾರಕ ನದಿಗಳ ಸಂಗಮ ಕ್ಷೇತ್ರದಲ್ಲಿ ನೆಲೆನಿಂತಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಜಾತ್ರೆ ಹಾಗೂ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.

ಎಚ್.ಮಟಕೆರೆ ಗ್ರಾಮದ ಐತಿಹಾಸಿಕ ರಾಮಲಿಂಗೇಶ್ವರ ಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ಫೆ.25ರಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ರಾಮಲಿಂಗೇಶ್ವರ ಸ್ವಾಮಿ ದೇಗುಲದ ಬಳಿ ಇರುವ ಬಸವೇಶ್ವರ ಸ್ವಾಮಿ ದೇವರ ಕೊಂಡೋತ್ಸವ ಜರುಗಿತು. ದೇವರ ಗುಡ್ಡಪ್ಪಗಳು ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಹಾಗೂ ಮಕ್ಕಳು ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು. ಕೊಂಡೋತ್ಸವ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.

ಫೆ.26 ರಂದು ಶಿವರಾತ್ರಿ ಹಬ್ಬದ ಅಂಗವಾಗಿ ರಾತ್ರಿ ರಾಮಲಿಂಗೇಶ್ವರಸ್ವಾಮಿಗೆ ತೈಲಾಭಿಷೇಕ ಮತ್ತು ಪೂಜಾ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ನಂತರ ಕಲಾತಪಸ್ವಿ ಈವೆಂಟ್ಸ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಫೆ.27 ರಂದು ದೇವಾಲಯದ ಆವರಣದಲ್ಲಿ ರಥೋತ್ಸವ ಜರುಗಿತು. ರಥಕ್ಕೆ ನವ ದಂಪತಿಗಳು ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಶಿವನಿಗೆ ಜೈಕಾರದೊಂದಿಗೆ ಸಾಗಿದ ರಥವನ್ನು ಮತ್ತೆ ದೇಗುಲದ ಬಳಿ ತಂದು ನಿಲ್ಲಿಸಲಾಯಿತು. ಜಾತ್ರೆಗೆ ಬಂದ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಅನಾದಿ ಕಾಲದಿಂದಲೂ ಕಪಿಲಾ ನದಿ ಮಧ್ಯೆ ಇರುವ ಸೋಮೇಶ್ವರ ಸ್ವಾಮಿಗೂ ಪೂಜೆ ಸಲ್ಲಿಸಲಾಯಿತು. ನದಿ ಹರಿವಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಚಿಕ್ಕಗುಡಿ ಕಾಣಿಸುತ್ತಿದ್ದು, ಭಕ್ತರು ದೋಣಿ ಮೂಲಕ ತೆರಳಿ ಪೂಜೆ ಸಲ್ಲಿಸಿದರು. ಹೈರಿಗೆ, ಮಾದಾಪುರ, ಕೋಳಗಾಲ, ಗುಜ್ಜಪ್ಪನ ಹುಂಡಿ, ಮಲಾರ ಕಾಲನಿ, ಹ್ಯಾಂಡ್‌ಪೋಸ್ಟ್, ಬೊಪ್ಪನಹಳ್ಳಿ, ಎಚ್.ಡಿ.ಕೋಟೆ, ಹೆಬ್ಬಲಗುಪ್ಪೆ, ಸರಗೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ಇದೇ ದಿನ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ವಿಜೇತ ತಂಡಕ್ಕೆ ಸಂಜೆ ಬಹುಮಾನ ನೀಡಲಾಯಿತು. ರಾತ್ರಿ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net