

ಅರಕಲಗೂಡು: ತಾಲೂಕಿನ ದೇವಾಲಯಗಳ ಊರು ರಾಮನಾಥಪುರದಲ್ಲಿ ಕಾವೇರಿ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಎ.ಟಿ. ರಾಮಸ್ವಾಮಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನವಸತಿ ಪ್ರದೇಶದತ್ತ ಉಕ್ಕೇರುತ್ತಿರುವ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಮಾತನಾಡಿ, ದೇವಾಲಯಗಳ ಆಸುಪಾಸು ವಾಸದ ಮನೆಗಳಿಗೆ ನೀರು ಆವರಿಸಿದ್ದು ತೊಂದರೆಗೆ ಒಳಗಾಗುವ ನಿವಾಸಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನದಿ ತಟದ ಜನರು ಪ್ರವಾಹ ಪರಿಸ್ಥಿತಿಯಿಂದ ಎದುರಾಗುವ ಸಂಕಷ್ಟಕ್ಕೆ ತುತ್ತಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.
ಪರಿಸರ ಹಾಳಾದ ಪರಿಣಾಮ ಕಳೆದ ಎರಡು ವರ್ಷಗಳಿಂದ ಕಾವೇರಿ ಪ್ರವಾಹ ಬಂದೆರಗುತ್ತಿದೆ. ಎಚ್ಚೆತ್ತು ಪರಿಸರ ಉಳಿಸದಿದ್ದರೆ ನದಿ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ರಾಮನಾಥಪುರದಲ್ಲಿ ಕಾವೇರಿ ನದಿ ದಂಡೆಗೆ ತಾತ್ಕಾಲಿಕವಾಗಿ ಮಣ್ಣು ತಡೆ ಕಟ್ಟಲಾಗಿದೆ. ಇದರಿಂದ ಪ್ರವಾಹ ತೊಂದರೆಯಿಂದ ಪಾರಾಗಲು ಅನುಕೂಲವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನದಿ ದಂಡೆ ಶಾಶ್ವತ ತಡೆಗೋಡೆಗೆ ಸರ್ಕಾರ ೧ ಕೋಟಿ ರೂ ಮಂಜೂರು ಮಾಡಿದ್ದು ಮಳೆಗಾಲ ಕಳೆದ ನಂತರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಕರೊನಾ ವಾರಿಯರ್ಸ್ ತಡೆಗೆ ಹೋರಾಟ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿಗೆ ಸೋಂಕು ತಗುಲಿ ಮೃತಪಟ್ಟಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸಿ ಕೋವಿಡ್ ತಡೆಗಟ್ಟಲು ಸದಾ ಜಾಗೃತರಾಗಿರಬೇಕು ಎಂದು ವಿನಂತಿಸಿದರು.
ತಹಸೀಲ್ದಾರ್ ರೇಣುಕುಮಾರ್, ತಾಪಂ ಇಒ ರವಿಕುಮಾರ್, ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಪಿಡಿಒ ವಿಜಯಕುಮಾರ್, ವಿವಿಧ ಇಲಾಖೆ ಅಧಿಕಾರಿ ಹಾಜರಿದ್ದರು.