

ಚಿತ್ರದುರ್ಗ: ದರಿದ್ರ ಹೊತ್ತುಕೊಂಡು ಬಂದು ಜನರ ಮೇಲೆ ಏರುತ್ತಿರುವ, ಅವರ ಹಣವನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೂ ದರಿದ್ರ ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯದಲ್ಲಿ ಬರವಿದೆ ಎಂಬುದಾಗಿ ಸರ್ಕಾರವೇ ಹೇಳುತ್ತಿದೆ. ಡಿಸಿ, ತಹಸೀಲ್ದಾರ್ ಖಾತೆಯಲ್ಲಿ ದುಡ್ಡಿದೆ ಎನ್ನುವ ಸಿಎಂ ಸಿದ್ದರಾಮಯ್ಯ 1 ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ. ಅನ್ನದಾತರು ಆತ್ಮಹತ್ಯೆ ಮಾಡಿಕೊಂಡ ನಂತರ ಕೊಡುತ್ತೀರಾ ಎಂದು ಕಿಡಿಕಾರಿದರು.
ಗ್ಯಾರಂಟಿಗೆ ಜನ ಮರುಳಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಆದರೆ, ಇವುಗಳಿಗೂ ಸರಿಯಾಗಿ ಹಣ ನೀಡುತ್ತಿಲ್ಲ. ನುಡಿದಂತೆ ನಡೆದಿಲ್ಲ. ಹೀಗಾಗಿ ಕೆಲಸವಿಲ್ಲದೆ, ರಾಜ್ಯದ ಗಡಿಭಾಗದ ಅನೇಕ ಮಂದಿ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದ್ದು, ಅಂಥವರ ವಿರುದ್ಧ 307 ಕಾಯ್ದೆಯಡಿ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಜಾಮೀನುರಹಿತ ವಾರೆಂಟ್ ಜಾರಿಯಾಗಬೇಕು. ಆದರೆ, ಸುಲಭವಾಗಿ ಜಾಮೀನು ಪಡೆದು ಹೊರಗೆ ಬರುತ್ತಿದ್ದಾರೆ. ಇದೇನಾ ನಿಮ್ಮ ಸ್ತ್ರೀಕುಲದ ಮೇಲಿನ ಕಾಳಜಿ ಎಂದು ಪ್ರಶ್ನಿಸಿದರು.
ಯಾರೋ ತಪ್ಪು ಮಾಡಿದ್ದಕ್ಕೆ ಬೆಳಗಾವಿ ಸಮೀಪ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ದುಷ್ಕರ್ಮಿಗಳು ಹೊಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ದೂರಿದರು.
ದಲಿತರ ಉದ್ಧಾರ ಮಾಡುತ್ತೇವೆ ಎನ್ನುವ ಕಾಂಗ್ರೆಸ್ಸಿಗರು ಎಸ್‌ಸಿಪಿ-ಟಿಎಸ್‌ಪಿಗಾಗಿ 34 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟ ಹಣವನ್ನೂ ಬೇರೆ ಯೋಜನೆಗಳಿಗೆ ಬಳಸಿ ವಂಚಿಸುತ್ತಿದ್ದಾರೆ. ಸಿಎಂ ವೀರಾವೇಶದ ಮಾತುಗಳೊಂದಿಗೆ ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕಾಗಲಿ, ರಾಜ್ಯಕ್ಕಾಗಲಿ ಟಿಪ್ಪು ಕೊಡುಗೆ ಏನು ಇಲ್ಲ. ಹೀಗಾಗಿ ಕರ್ನಾಟಕದ ಯಾವುದೇ ವಿಮಾನ ನಿಲ್ದಾಣಕ್ಕೂ ಆ ಹೆಸರಿಡಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.