ರಾಜ್ಯದಲ್ಲಿ ಟಿಇಟಿ ಸುಸೂತ್ರ

Raghu_04_Teachers_Eligibility_Exam_@_National_College (5)
Published on

ರಾಜ್ಯದಲ್ಲಿ ಟಿಇಟಿ ಸುಸೂತ್ರ

  • ಬೆಂಗಳೂರು
    ರಾಜ್ಯಾದ್ಯಂತ ಭಾನುವಾರ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ಯಶಸ್ವಿಯಾಗಿ ನಡೆದಿದೆ. ರಾಜ್ಯದ 604 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಶೇ.84 ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
    ಪತ್ರಿಕೆ-1ಕ್ಕೆ ಮೊದಲ ಪತ್ರಿಕೆಯಲ್ಲಿ ನೋಂದಣಿಯಾಗಿದ್ದ 74,976 ಅಭ್ಯರ್ಥಿಗಳಲ್ಲಿ 57,134 ಹಾಜರಾಗಿದ್ದಾರೆ. ಪತ್ರಿಕೆ-2ಕ್ಕೆ 1,69,716ರಲ್ಲಿ 1,47,307 ಹಾಜರಾಗಿದ್ದಾರೆ. ಒಟ್ಟಾರೆ 2,44,692 ಅಭ್ಯರ್ಥಿಗಳಲ್ಲಿ ಈ ಪೈಕಿ 2,04,441 (ಶೇ.84) ಅಭ್ಯರ್ಥಿಗಳು ಹಾಜರಾಗಿದ್ದು, 40,251 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.
    ಸರ್ಕಾರ ನೀಡಿದ್ದ ಮಾರ್ಗಸೂಚಿ ಆಧಾರದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆಯ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು. ಕೇಂದ್ರದಲ್ಲಿರುವ ಆರೋಗ್ಯ ತಪಾಸಣಾ ಕೌಂಟರ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿ ಪ್ರವೇಶ ಪಡೆದಿದ್ದಾರೆ. ಎಲ್ಲಿಯೂ ಲೋಪವಾಗದಂತೆ ಪರೀಕ್ಷೆ ನಡೆದಿರುವ ಬಗ್ಗೆ ವರದಿಯಾಗಿದೆ.
    ರಾಜ್ಯಾದ್ಯಂತ ಪರೀಕ್ಷೆಯು ಸುಸೂತ್ರವಾಗಿ ನಡೆದಿದೆ. ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಸುಮಾರು ಎರಡು ಸಾವಿರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮಾಡಿಕೊಂಡಿದ್ದರು. ಕರೊನಾ ಸೋಂಕಿತ ಅಭ್ಯರ್ಥಿಗಳಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಯಾವುದೇ ಕರೊನಾ ಸೋಂಕಿತರು ಹಾಜರಾಗಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕೇಂದ್ರೀಯ ದಾಖಲಾತಿ ಘಟಕದ ವಿಶೇಷಾಧಿಕಾರಿ ಎಸ್.ಗೀತಾ ತಿಳಿಸಿದ್ದಾರೆ.
    ಕಳೆದ ಬಾರಿಗಿಂತ ಈ ಬಾರಿ ಪ್ರಶ್ನೆಗಳ ಆಯ್ಕೆಯಲ್ಲಿ ವಿಭಿನ್ನವಾಗಿತ್ತು. ಕರ್ನಾಟಕ ಪಠ್ಯಪುಸ್ತಕ ಸಂಘ ಪ್ರಕಟಿಸಿರುವ ಪುಸ್ತಕಗಳಲ್ಲಿ ಇಲ್ಲದೆ ಕೆಲವು ಪ್ರಶ್ನೆಗಳನ್ನು ನೀಡಲಾಗಿತ್ತು. ಆದ್ದರಿಂದ ಶಿಕ್ಷಣ ಇಲಾಖೆ ಕೀ ಉತ್ತರ ಪ್ರಕಟಿಸಿದ ಬಳಿಕ ಆಕ್ಷೇಪಣೆ ಸಲ್ಲಿಸುವುದಾಗಿ ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳು ತಿಳಿಸಿದ್ದಾರೆ.
    ವಾರದಲ್ಲಿ ಕೀ ಉತ್ತರ: ಭಾನುವಾರ ಪರೀಕ್ಷೆ ಮುಗಿದಿದ್ದು, ರಾಜ್ಯದ ವಿವಿಧ ಕೇಂದ್ರಗಳಿಂದ ಉತ್ತರ ಪತ್ರಿಕೆಗಳು ಬೆಂಗಳೂರು ತಲುಪಲು ಎರಡು ದಿನಗಳು ಬೇಕಿದೆ. ಪತ್ರಿಕೆಗಳು ಇಲಾಖೆ ಉಗ್ರಾಣಕ್ಕೆ ಸೇರಿದ ಬಳಿಕ ಕೀ ಉತ್ತರಗಳನ್ನು ಪ್ರಕಟಿಸಲಿದ್ದು, ಇದಕ್ಕೆ ಒಂದು ವಾರದ ಕಾಲವಕಾಶ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net