

ಕೆಸರೆ ಗ್ರಾಮದ ಸರ್ವೇ ನಂ.464ರ ಸಂಬಂಧ ನಿಮ್ಮ ಅಧಿಕಾರಿ ಮತ್ತು ಕಾನೂನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಂಬಂಧಿಸಿದ ದಾಖಲೆಗಳೊಂದಿಗೆ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಿ ಹಾಗೂ ನ್ಯಾಯಾಂಗ ನಿಂದನೆ ಆಗುವುದನ್ನು, ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ತಪ್ಪಿಸಿ ಎಂದು ಒತ್ತಾಯಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್ ಅವರಿಗೆ ಪತ್ರ ಬರೆದಿದ್ದಾರೆ.
ಸಾರಾಂಶವಿಷ್ಟು...
ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿಕೊಂಡು ಅವರ ಕುಟುಂಬದವರ ಹೆಸರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ನಾನು ಹಲವಾರು ದೂರರ್ಜಿಗಳನ್ನು ನೀಡಿದ್ದೇನೆ. ಕೊನೆಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮೂಲಕ ಮೈಸೂರಿನ ಲೋಕಾಯುಕ್ತದಲ್ಲಿ 11/2024 ಸಂಖ್ಯೆಯ ಮೊಕದ್ದಮೆ ದಾಖಲಿಸಲಾಯಿತು. ಇದೇ ರೀತಿ ಇತರ ಜನಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳು ಸಹ ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಎಲ್ಲ ತಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾನು ಮನವಿ ಮಾಡಿದ್ದೆ. ಬಳಿಕ ಸರ್ಕಾರದಿಂದಲೇ ನೇಮಕವಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರು ಈ ವಿಚಾರದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ, ನನ್ನ ದೂರರ್ಜಿ ಆಧರಿಸಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಪ್ತರು, ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ, ಇತರ ದೂರುದಾರರ ವಿರುದ್ಧ ಹಾಗೂ ನಮ್ಮ ಮನವಿಯನ್ನು ಪರಿಗಣಿಸಿ, ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ, ಸಿದ್ದರಾಮಯ್ಯ ಅವರ ರಿಟ್ ಅರ್ಜಿಯನ್ನು ವಜಾ ಮಾಡಿದ ಉಚ್ಚ ನ್ಯಾಯಾಲಯದ ವಿರುದ್ಧ್ದ, ನನ್ನ ಖಾಸಗಿ ದೂರರ್ಜಿ ಆಧರಿಸಿ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸುವಂತೆ ಆದೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದ ಜನತೆ ನಮ್ಮಂತಹ ಹೋರಾಟಗಾರರು, ನ್ಯಾಯಾಲಯಗಳನ್ನು ಅನುಮಾನದಿಂದ ನೋಡುವಂತಹ ದುಸ್ಥಿತಿ ನಿರ್ಮಾಣ ಆಗುತ್ತಿದೆ. ನಿಮ್ಮ ಸಂಸ್ಥೆಯ ಸ್ವತ್ತನ್ನು ಕಾಪಾಡಲು, ಅನ್ಯರ ಪಾಲಾಗಿರುವ ಸ್ವತ್ತನ್ನು ಮರಳಿ ನಿಮ್ಮ ಸಂಸ್ಥೆಗೆ ವಾಪಸು ಕೊಡಿಸಲು ಹೋರಾಟ ಮಾಡುತ್ತಿರುವುದರಿಂದ ಇದೆಲ್ಲ ಆಗುತ್ತಿದೆ.
ನಿಮ್ಮ ಸಂಸ್ಥೆಗಾಗಿ ನಾವು ಹೋರಾಟ ನಡೆಸುತ್ತಿದ್ದರೆ, ಸಂಸ್ಥೆಯಿಂದ ಸಂಬಳ, ಸೌಲಭ್ಯ ಪಡೆಯುವ ನೀವು ಮತ್ತು ನಿಮ್ಮ ಸಂಸ್ಥೆಯ ಇತರ ಅಧಿಕಾರಿಗಳು ಮೌನವಾಗಿರುವುದು ದುರಂತ. ಇದರಿಂದ ದೂರುದಾರರಾದ ನಮಗೆ ಅವಮಾನ ಆಗುವುದಕ್ಕಿಂತ ಹೆಚ್ಚಾಗಿ, ನ್ಯಾಯಾಲಯಗಳಿಗೆ ಹೆಚ್ಚಿನ ಅವಮಾನವಾಗುತ್ತಿದೆ, ನ್ಯಾಯಾಂಗದ ನಿಂದನೆ ಆಗುತ್ತಿದೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಅಂದರೆ ನ್ಯಾಯಾಲಯಗಳ ನಿಂದನೆಗೆ, ಸಮಾಜದ ಸ್ವಾಸ್ಥ್ಯಕ್ಕೆ ಹಾಳಾಗುವುದಕ್ಕೆ ನೀವು ಮತ್ತು ನಿಮ್ಮ ಸಂಸ್ಥೆಯ ಇತರ ಅಧಿಕಾರಿಗಳು ಕಾರಣ. ಆದ್ದರಿಂದ ಕೂಡಲೇ ಕೆಸರೆ ಗ್ರಾಮದ ಸರ್ವೇ ನಂ.464ರ ಸಂಬಂಧ ನಿಮ್ಮ ಅಧಿಕಾರಿಗಳು, ಕಾನೂನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಬೇಕು. ಈ ವಿಚಾರಗಳ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡುವ ಮೂಲಕ ರಾಜ್ಯ ಜನತೆಗೆ ಸತ್ಯಾಂಶ ತಿಳಿಸಬೇಕೆಂದು ಮನವಿ ಮಾಡುವೆ.
ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ ಎಂಬ ಕಾರಣಗಳನ್ನು ನೀಡಿ ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟೀಕರಣ ಕೊಡುವುದಿಲ್ಲ, ಸತ್ಯವನ್ನು ತಿಳಿಸುವುದಿಲ್ಲ ಎಂದು ತಾವು ಹೇಳಬಾರದಾಗಿ ಮನವಿ ಮಾಡುತ್ತೇನೆ. ಏಕೆಂದರೆ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ರಾಜ್ಯದ ಜನರಿಗೆ ಸತ್ಯ ತಿಳಿಸಬಾರದು ಎಂಬ ನಿಯಮ ಇರುವುದಿಲ್ಲ. ನ್ಯಾಯಾಂಗ ನಿಂದನೆಯಂತಹ ಗಂಭೀರವಾದ ವಿಚಾರ ಇರುವುದರಿಂದ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದರಿಂದ ಜನತೆಗೆ ಸತ್ಯವನ್ನು ತಿಳಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ. ಈ ಮನವಿ ಪತ್ರ ಸ್ವೀಕರಿಸಿದ ಮೂರು ದಿನಗಳಲ್ಲಿ ನನ್ನ ಮನವಿಯಂತೆ ರಾಜ್ಯದ ಜನತೆಗೆ ಸತ್ಯವನ್ನು ತಿಳಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯಂತಹ ಕೃತ್ಯಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದೀರಾ ಎಂದು ಪರಿಗಣಿಸಿ, ನಿಮ್ಮ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.