ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಿನಾಕಾರಣ ಸಂಘರ್ಷ

21-MDG-2P1
Published on

ಮೂಡಿಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದರೂ ಬಿಜೆಪಿ ಮುಖಂಡರು ಸುಳ್ಳು ಕಥೆ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯ ಸುಳ್ಳು ಆರೋಪಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಟೀಕೆಗಳಿಗೆ ತಕ್ಕ ಉತ್ತರ ನೀಡಿದಲ್ಲಿ ರಾಜ್ಯದಲ್ಲಿ ಬಿಜೆಪಿ ಧೂಳೀಪಟವಾಗಲಿದೆ ಎಂದು ಮಾಜಿ ಸಚಿವೆ ಮೋಟಮ್ಮ ಎಚ್ಚರಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ 60 ವರ್ಷಗಳಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಈ ಬಾರಿ 136 ಶಾಸಕರ ಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗಳಿಗೆ ಸಂಪನ್ಮೂಲ ಹೊಂದಿಸಿಕೊಂಡು ಅಭಿವೃದ್ಧಿಯಲ್ಲೂ ಹಿಂದೆ ಬೀಳದೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ರಾಜ್ಯದ ಜನರ ಮನಸ್ಸನ್ನು ಗೆದ್ದಿದೆ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಅವರ ಅಧಿಕಾರಾವಧಿಯಲ್ಲಿ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಲು ಸಂಚು ರೂಪಿಸಿದ್ದಾರೆ ಎಂದು ಸೋಮವಾರ ಹೇಳಿಕೆಯಲ್ಲಿ ತಿಳಿಸಿದರು.

ಇದಕ್ಕೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕಡೆಗೆ ಮಾತ್ರ ಗಮನಹರಿಸಿದೆ. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಕುಸಿತಕ್ಕೊಳಗಾದ ಮನೆಗಳಿಗೆ ಸರ್ಕಾರ ಪರಿಹಾರ ನೀಡಿದೆ. ನಿರಾಶ್ರಿತರಿಗೆ ಹೊಸ ಮನೆ ಮಂಜೂರು ಮಾಡಿದೆ. ಕುಸಿದ ಸೇತುವೆ, ಮೋರಿ, ಬಾಕ್ಸ್ ಚರಂಡಿ, ಕೊಚ್ಚಿಹೋದ ರಸ್ತೆಗಳ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಲಾಗಿದೆ ಎಂದರು.

ಮಳೆಯಿಂದ ರಸ್ತೆಯೊಂದು ಗುಂಡಿಯಾಗಿದ್ದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಹೊಣೆ ಮಾಡಿರುವ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಆಲ್ದೂರು ಸಮೀಪದ ರಸ್ತೆಯೊಂದರ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದ್ದಾರೆ. ಆದರೆ ಆ ರಸ್ತೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕಳಪೆ ಕಾಮಗಾರಿ ಮಾಡಿದ್ದರಿಂದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿದವರು ಅದೇ ರಸ್ತೆಯ ಗುಂಡಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸುತ್ತಿರುವುದು ಬಿಜೆಪಿ ಮುಖಂಡರ ನೈತಿಕತೆ ತೋರಿಸುತ್ತದೆ. ಕಾಂಗ್ರೆಸ್ ಕಾಮಗಾರಿಯಲ್ಲಿ ಕಳಪೆ ಮಾಡದೆ ಗುಣಮಟ್ಟ ಕಾಯ್ದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net