

ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ಆ. 1ರಂದು ರಾಜ್ಯದೆಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ಕಲ್ಪಿತ ಶವಯಾತ್ರೆ ನಡೆಸಿ, ಸಾಮೂಹಿಕವಾಗಿ ಕೇಶಮುಂಡನ ಮಾಡಿಕೊಳ್ಳಲಾಗುವುದೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ತೀರ್ಪು ನೀಡಿ ಆ. 1ಕ್ಕೆ ಒಂದು ವರ್ಷವಾಗಲಿದೆ. ಹೀಗಾಗಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಿಗೆ ವಂಚಿಸಿಕೊಂಡು ಬರುತ್ತಿದ್ದಾರೆ. ಅನಗತ್ಯ ಆಯೋಗ ರಚಿಸಿ, ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಆದ್ದರಿಂದ ಆ. 1ರಿಂದ 30ರೊಳಗೆ ದಿನಾಂಕ ನಿಗದಿಪಡಿಸಿಕೊಂಡು ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು. ಇದೇ ವೇಳೆ ರಾಹುಲ್‌ಗಾಂಧಿ ನಿವಾಸಕ್ಕೆ ಮುತ್ತಿಗೆ ಹಾಕಿ ರಾಜ್ಯದಲ್ಲಿನ ನಿಮ್ಮ ಪಕ್ಷದ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಲಾಗುವುದು ಎಂದು ಕಿಡಿಕಾರಿದರು.
ನೂರೊಂದು ಜಾತಿಗಳಿಗೂ ಸಂಜೀವಿನಿಯಾಗಿರುವ ಒಳ ಮೀಸಲಾತಿ ಜಾರಿ ಸಂಬಂಧ ಪ್ರಧಾನಿ ಹಾಗೂ ರಾಷ್ಟ್ರಪತಿಗೂ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಎಲ್ಲ ಪಕ್ಷಗಳ ರಾಜಕೀಯ ನಾಯಕರು, ವಿವಿಧ ಸಮುದಾಯದ ಹೋರಾಟಗಾರರು, ಮಠಾಧೀಶರು, ಜನಪರ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಲಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಎಸ್. ಅರುಣ್‌ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮುದಾಯದ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆಂದು ಅಸಮಾಧಾನ ಹೊರಹಾಕಿದರು.
ತೆಲಂಗಾಣ, ಆಂಧ್ರ, ಹರಿಯಾಣ, ತಮಿಳುನಾಡಿನಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಕರ್ನಾಟಕದಲ್ಲಿ ಇನ್ನೂ ಆಗಿಲ್ಲ. ಇದಕ್ಕಾಗಿ ಹೋರಾಟ ಅನಿವಾರ್ಯ ಎಂದರು.
ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟ ರಾಜೇಂದ್ರ ಎಲ್. ಮಾಳಪ್ಪ, ಶಿವಕುಮಾರ್ ಬೆಳ್ತೂರ್, ರಘುರಾಜ್ ಕೊಳ್ಳಿ, ಎಂ.ಆರ್. ಸುಧೀಂದ್ರಕುಮಾರ್, ಸುರೇಶ್, ಸಿ.ಬಸವರಾಜ್, ರಘು, ಫಕೀರಪ್ಪ, ದಲಿತ ಮುಖಂಡ ಶಿವಣ್ಣ ಇತರರಿದ್ದರು.