

ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಗನ್‌ಹೌಸ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ರೈತ ಚಳವಳಿಯನ್ನು ದುರ್ಬಲಗೊಳಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಯಾರು ಸೊಪ್ಪು ಹಾಕ್ಕುತ್ತಿಲ್ಲ. ಚಳವಳಿಗಾರರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ ಇದೇ ಚಳವಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಶುಭಕರಣಸಿಂಗ್ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂ. ಪರಿಹಾರ ನೀಡಲು ಹೋಗಿತ್ತು. ಆದರೆ ಅವರ ಕುಟುಂಬ ಪರಿಹಾರ ಬೇಡ ಎಂದು ತಿರಸ್ಕಾರ ಮಾಡಿ ರೈತರ ಸಮಸ್ಯೆ ಬಗೆಹರಿಸಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದು ರೈತರ ಚಳವಳಿಯ ಬದ್ಧತೆಯನ್ನು ಎತ್ತಿ ತೋರಿಸಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ದೇಶಾದ್ಯಂತ ಭಾಷಣ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿ ಅಧಿಕಾರಕ್ಕೆ ಬಂದರೂ ಸಮಸ್ಯೆ ಬಗೆಹರಿಸಲಿಲ್ಲ ಎಂದು ದೂರಿದರು.
ದೇಶದ ಕೃಷಿ ಮಂತ್ರಿ ಪಂಜಾಬ್, ಹರಿಯಾಣ ರಾಜ್ಯಗಳ ಮಂತ್ರಿಗಳನ್ನು ಜತೆಯಲ್ಲಿ ಉಪವಾಸ ನಿರತರ ಜತೆ ಮಾತುಕತೆ ನಡೆಸಿ ಉಪವಾಸ ಕೈಬಿಡುವಂತೆ ಮನವಿ ಮಾಡಿ ಪ್ರಾಣ ಅಪಾಯ ತಪ್ಪಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಇವರೇ ಕಾರಣ ಎಂದು ಎಚ್ಚರಿಸುತ್ತಿದ್ದೇವೆ ಎಂದರು.
ಇದೇ ವೇಳೆ ರೈತರು ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ಸುಡಲು ಯತ್ನಿಸಿದಾರೆ. ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಮುಖಂಡರಾದ ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೀಲಕಂಠಪ್ಪ, ಕೆ.ಸಿದ್ದೇಶ್, ವಿಜಯೇಂದ್ರ, ವೆಂಕಟೇಶ್ ಇತರರಿದ್ದರು.