ರಾಜ್ಯ ಬಿಜೆಪಿ ಸಂಘಟನೆಗೆ ಸಪ್ತಸೂತ್ರ: ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ; ವದಂತಿ ಹಬ್ಬಿಸುವವರಿಗೆ ಬಹಿರಂಗ ಎಚ್ಚರಿಕೆ

BJP
ಮತಾಂತರ ನಿಷೇಧ ಕಾಯ್ದೆ ಮಂಡಿಸಿದ್ದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದರು.
Published on

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆ ಬಲಗೊಳಿಸುವುದು, ಪಕ್ಷ ಹಾಗೂ ಸರ್ಕಾರದಲ್ಲಿನ ಗೊಂದಲಗಳಿಗೆ ಇತಿಶ್ರೀಯಾಡಲು ಸಪ್ತಸೂತ್ರಗಳನ್ನು ಹುಬ್ಬಳ್ಳಿಯಲ್ಲಿ ಮಂಗಳವಾರ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಿದ್ಧಪಡಿಸಿದೆ. ಹಾನಗಲ್, ಮೇಲ್ಮನೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದರಿಂದ ಮುಂದಿನ ಚುನಾವಣೆಗಳಿಗೆ ಎಚ್ಚರಿಕೆ ತೆಗೆದುಕೊಳ್ಳುವ ಉದ್ದೇಶದಿಂದ ಸಂಘಟನೆ ಚುರುಕು ಮಾಡುವ ಬಗ್ಗೆ ಕಾರ್ಯಕಾರಿಣಿಯಲ್ಲಿ ಒತ್ತುಕೊಟ್ಟು ಚರ್ಚೆ ನಡೆಸಲಾಗಿದೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪದೇಪದೆ ಗುಸುಗುಸು ಕೇಳಿ ಬರುತ್ತಿದ್ದು, ಅದಕ್ಕೆ ಪೂರಕವಾಗಿ ಕೆಲವು ಸಚಿವರೇ ಪೂರಕ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದರಿಂದ ಅಂತಹ ಪ್ರಕ್ರಿಯೆ ಯಾವುದು ಇಲ್ಲ ಎಂಬುದನ್ನು ಕಾರ್ಯಕಾರಿಣಿ ಸ್ಪಷ್ಟಪಡಿಸಿದೆ.

ಮೂರು ತಿಂಗಳ ಹಿಂದೆ ದಾವಣಗೆರೆಯಲ್ಲಿ ಕಾರ್ಯಕಾರಿಣಿ ನಡೆದಿತ್ತು, ಇದೀಗ ಹುಬ್ಬಳ್ಳಿಯಲ್ಲಿ ನಡೆಸಲಾಗಿದೆ. ಮೂರು ತಿಂಗಳಿನಲ್ಲಿ ನಡೆದಿರುವ ಬೆಳವಣಿಗೆಗಳನ್ನು ಇಲ್ಲಿ ಪರಾಮರ್ಶೆ ಮಾಡಲಾಯಿತು. ಬುಧವಾರ ಮಧ್ಯಾಹ್ನದ ತನಕ ರಾಜ್ಯ ಕಾರ್ಯಕಾರಿಣಿ ಮುಂದುವರಿಯಲಿದ್ದು, ಆನಂತರ ಕೋರ್ ಕಮಿಟಿ ಸಭೆಯಲ್ಲಿ ಕಾರ್ಯಕಾರಿಣಿಯ ನಿರ್ಣಯಗಳಿಗೆ ಅಧಿಕೃತ ಮುದ್ರೆ ಒತ್ತಲಾಗುತ್ತದೆ. ರಾಜಕೀಯವಾಗಿಯೂ ಮಹತ್ವದ ಚರ್ಚೆಗಳು ನಡೆಯಲಿವೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಕೆಲವೊಂದು ಮಹತ್ವದ ಚರ್ಚೆಗಳಾಗಿವೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರರು ಭಾಗವಹಿಸಿದ್ದರು.

ಚುನಾವಣೆ ವರ್ಷ: ರಾಜ್ಯದಲ್ಲಿ 2022ರಲ್ಲಿಯೂ ಚುನಾವಣೆಗಳು ಎದುರಾಗುತ್ತಿವೆ. ಅದರಲ್ಲಿ ಪ್ರಮುಖವಾಗಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿವೆ. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಈ ಎರಡು ಅತ್ಯಂತ ಮುಖ್ಯವಾಗಿರುವುದರಿಂದ ಹೆಚ್ಚಿನ ಗಮನ ಹರಿಸುವಂತೆ ಕಾರ್ಯಕಾರಿಣಿ ಸದಸ್ಯರಿಗೆ ಸೂಚನೆ ನೀಡಲಾಯಿತು. ಮೇಲ್ಮನೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಬಂದಿಲ್ಲ. ಈ ಚುನಾವಣೆಯಲ್ಲಿ ಏನೇನು ಲೋಪಗಳಾಗಿವೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದೆ ತಪು್ಪಗಳನ್ನು ತಿದ್ದಿಕೊಂಡು ಮುಂದುವರಿಯಬೇಕೆಂದು ನಿರ್ಧಾರವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆಯಾಗಿದೆ.

ಕಾಯ್ದೆಗಳ ಲಾಭ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವ ಮೂಲಕ ರಾಜಕೀಯ ಲಾಭ ಪಡೆಯುವ ಕಡೆ ಆದ್ಯತೆ ನೀಡಬೇಕು. ಮತಗಳ ಕ್ರೋಡೀಕರಣಕ್ಕೂ ಆದ್ಯತೆ ನೀಡಬೇಕೆಂದು ನಿರ್ಧಾರ ಮಾಡಲಾಯಿತು. ಎರಡು ಕಾಯ್ದೆಗಳು ಎಷ್ಟು ಅಗತ್ಯವೆಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ತೀರ್ವನಿಸಲಾಯಿತು.

ಮುಖ್ಯಮಂತ್ರಿ ಬೊಮ್ಮಾಯಿ ಸೇಫ್

ಹುಬ್ಬಳ್ಳಿ ಕಾರ್ಯಕಾರಿಣಿಯಲ್ಲಿ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಬ್ಯಾಟಿಂಗ್ ಮಾಡಿದ್ದು, ನಾಯಕತ್ವ ಬದಲಾವಣೆ ಕುರಿತು ಗುಸು ಗುಸು ಸುದ್ದಿ ಹಬ್ಬಿಸುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶ ಬಿತ್ತರಿಸಿದ್ದಾರೆ. ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಮಾಡಿದರೆ ಪ್ರತಿಪಕ್ಷಗಳು ಅದೇ ವಿಷಯವನ್ನು ಅಸ್ತ್ರವಾಗಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಯಾರೂ ಅವಕಾಶ ಮಾಡಿಕೊಡದಿರಿ ಎಂದು ಕಿವಿಮಾತು ಹೇಳಿದರು. ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಊಹಾಪೋಹ ಎಬ್ಬಿಸುವ ಕೆಲವರನ್ನು ಗುರುತಿಸಲಾಗಿದೆ. ಇಂಥದ್ದನ್ನೇ ಮುಂದುವರಿಸಿದರೆ ಪಕ್ಷ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೊಮ್ಮಾಯಿ ಸಿಎಂ ಆದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿಎಂ ಎಂದರೆ ಚೀಫ್ ಮಿನಿಸ್ಟರ್ ಅಲ್ಲ, ಕಾಮನ್ ಮ್ಯಾನ್ ಎಂದು ಹೇಳುತ್ತ, ಅದರಂತೆ ಸರಳತೆಯನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವರ್ತನೆ, ಕೆಲಸಗಳಿಂದ ಪಕ್ಷದ ವರ್ಚಸ್ಸು ಹಂತ ಹಂತವಾಗಿ ಹೆಚ್ಚುತ್ತಿದೆ. ಹೀಗಾಗಿ, ಯಾರೊಬ್ಬರೂ ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎಂದೆಲ್ಲ ಮಾತನಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.

ನಿತ್ಯ 15 ಗಂಟೆ ಕೆಲಸ: ವರ್ಷಪೂರ್ತಿ ನಿತ್ಯ 15 ಗಂಟೆ ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈ ಸಂಕಲ್ಪ ತೊಟ್ಟಿದ್ದರಿಂದ ಈಗಿನಿಂದಲೇ ಕೆಲಸ ಶುರು ಮಾಡಿದ್ದೇನೆ. ನಾವು ನಮ್ಮದೇ ಆದ ತಂಡವನ್ನು ಹೊಂದಿದ್ದೇವೆ. ನಾವೆಲ್ಲ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

150 ಸ್ಥಾನ ಗೆಲ್ಲಲು ಕಾರ್ಯತಂತ್ರ

ಹುಬ್ಬಳ್ಳಿ: ನಗರದಲ್ಲಿ ಏರ್ಪಾಟಾಗಿರುವ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಆರಂಭವಾಗುವ ಮುನ್ನ ಮಂಗಳವಾರ ಬೆಳಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ವಿಭಾಗೀಯ ಪ್ರಭಾರಿ, ಸಹ ಪ್ರಭಾರಿ, ಸಂಘಟನೆ ಹಾಗೂ ಸಹ ಸಂಘಟನೆ ಪ್ರಮುಖರ ಸಭೆ ನಡೆಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧನೆಯ ಬಗ್ಗೆ ಅರುಣ್ ಸಿಂಗ್ ಮಾರ್ಗದರ್ಶನ ನೀಡಿದರು ಎಂದರು. ಸಂಘಟನೆ ಬಲಪಡಿಸಬೇಕು. ಇದಕ್ಕಾಗಿ 311 ಮಂಡಳ ಹಾಗೂ 56 ಸಾವಿರ ಬೂತ್​ಗಳಲ್ಲಿ ಪೇಜ್ ಪ್ರಮುಖರನ್ನು ನೇಮಿಸಬೇಕು. ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸದಾ ಸಿದ್ಧರಾಗಿರಬೇಕು ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ಎನ್ನುವುದು ಆಧಾರರಹಿತ ಚರ್ಚೆ. ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಸಂಪುಟ ಪುನಾರಚನೆ ಇಲ್ಲಿ ಚರ್ಚೆ ಆಗುವುದಿಲ್ಲ. ಸಂಘಟನೆ ಬಗ್ಗೆ ಮಾತ್ರ ಚರ್ಚೆಯಾಗುತ್ತದೆ. ಯಡಿಯೂರಪ್ಪ ವಿದೇಶದಲ್ಲಿರುವ ಕಾರಣ ಸಭೆಗೆ ಬಂದಿಲ್ಲ, ಅದಕ್ಕೆ ವಿಶೇಷ ಅರ್ಥ ಕಲ್ಪಸಬೇಕಾಗಿಲ್ಲ.

| ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಪಕ್ಷದ ಒಳಗೆ ಇಂತಹದು ಒಂದು ಚರ್ಚೆ ಆಗುತ್ತಿದೆ. ಅದಕ್ಕೆ ಬ್ರೇಕ್ ಹಾಕಿದ್ದೇವೆ. 2023ರ ಚುನಾವಣೆ ಫಲಿತಾಂಶ ಬರುವವರೆಗೂ ಬಸವರಾಜ ಬೊಮ್ಮಯಿ ಅವರೇ ಸಿಎಂ ಆಗಿರುತ್ತಾರೆ. ಅವರ ನಾಯಕತ್ವದಲ್ಲಿಯೇ ಚುನಾವಣೆ ನಡೆಯಲಿದೆ.

| ಅರುಣ್ ಸಿಂಗ್ ರಾಜ್ಯ ಉಸ್ತುವಾರಿ

ಸಪ್ತ ಸೂತ್ರಗಳೇನು?

  1. ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ಅವರದೇ ನಾಯಕತ್ವ
  2. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸಚಿವರು ನಡವಳಿಕೆ ತಿದ್ದಿಕೊಳ್ಳಬೇಕು
  3. 2023ರ ಚುನಾವಣೆ ಮೊದಲ ಆದ್ಯತೆ, 150 ಸ್ಥಾನ ಗೆಲ್ಲುವ ಗುರಿ
  4. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು
  5. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಬೇಕು
  6. ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ರಾಜಕೀಯ ಲಾಭ ಪಡೆಯಬೇಕು
  7. ಕಾಂಗ್ರೆಸ್​ನ ಒಳಜಗಳದ ರಾಜಕೀಯ ಲಾಭ ಪಡೆಯಲು ಯತ್ನಿಸಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net