

ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ 33ನೇ ಹಿರಿಯರ ರಾಜ್ಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಕ್ರೀಡಾಕೂಟ ನೆರವೇರಿತು.
ಸ್ಪರ್ಧೆಯ ಜತೆಗೆ ಚೆನ್ನೈನಲ್ಲಿ ಫೆಬ್ರುವರಿ 17ರಿಂದ 20ರವರೆಗೆ 23ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯಲಿದ್ದು, ಅದಕ್ಕೆ ಕರ್ನಾಟಕ ತಂಡವನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು.
ಭಾರತೀಯ ಪ್ಯಾರಾಲಂಪಿಕ್ ಸಮಿತಿ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 600ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.
ದೈಹಿಕ ಅಂಗವಿಕಲರು, ಮಾನಸಿಕ ಅಸ್ವಸ್ಥರು, ನರದೌರ್ಬಲ್ಯ ಸಮಸ್ಯೆವುಳ್ಳವರು, ದೃಷ್ಟಿದೋಷವುಳ್ಳವರ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆದವು. ಒಟ್ಟು 72 ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ದೈಹಿಕ ನ್ಯೂನತೆಯನ್ನು ಮರೆತು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.