

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆ ಮತ್ತು ನಗರ ಪೊಲೀಸ್ ಕಮಿಷನರೇಟ್ ಪುನಾರಚನೆಗೆ ಸರ್ಕಾರ ಮುಂದಾಗಿದೆ. ಡಿಜಿಪಿ ಪ್ರವೀಣ್ ಸೂದ್ ಮತ್ತು ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಪ್ರತ್ಯೇಕ 2 ಉನ್ನತ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಚಿತ್ರಕಲಾ ಪರಿಷತ್‌ನಲ್ಲಿ ಪೊಲೀಸರ ಸಂಸ್ಮರಣಾ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಕರೊನಾ ಹೋರಾಟದಲ್ಲಿ ಮಡಿದ ಪೊಲೀಸ್ ಸಿಬ್ಬಂದಿ ಭಾವಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕಮಲ್ ಪಂತ್ ಸಮಿತಿ ನೀಡುವ ವರದಿ ಆಧರಿಸಿ ನಗರ ಪೊಲೀಸ್ ವ್ಯವಸ್ಥೆ ಪುನಾರಚನೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಠಾಣೆಗಳ ವಿಸ್ತಾರ, ಜನಸಂಖ್ಯೆ, ಅದಕ್ಕೆ ತಕ್ಕಂತೆ ಪೊಲೀಸರ ಬಲ ಹಾಗೂ ಮೂಲಸೌಲಭ್ಯಗಳು ಸೇರಿದಂತೆ ಅಂಶಗಳನ್ನಾಧರಿಸಿ ಠಾಣೆಗಳ ಪುನಾರಚನೆ ಮಾಡಲಾಗುತ್ತದೆ ಎಂದರು.
ನಗರದಲ್ಲಿ ಡ್ರಗ್ಸ್ ದಂಧೆ, ರೌಡಿಸಂ ಹೀಗೆ ಪ್ರತಿಯೊಂದು ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲಾಗುತ್ತದೆ.
ಡಿ.ಜೆ ಹಳ್ಳಿ-ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಆದತ್ಯೆ ನೀಡಲಾಗಿದೆ. ಕೆಲ ಪ್ರದೇಶಗಳನ್ನು ಬೇರ್ಪಡಿಸಿ ಗೋವಿಂದಪುರದಲ್ಲಿ ಹೊಸ ಠಾಣೆ ತೆರೆಯಲಾಗುತ್ತದೆ. ಈ 3 ಠಾಣೆ ಒಳಗೊಂಡು ಎಸಿಪಿ ದರ್ಜೆ ಉಪವಿಭಾಗ ರಚಿಸಲಾಗಿದೆ. ಅಗತ್ಯ ಸಿಬ್ಬಂದಿ ನಿಯೋಜನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಹೊಸ ಠಾಣೆ ಮತ್ತು ಉಪವಿಭಾಗ ಕಾರ್ಯಾರಂಭಿಸಲಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್-19 ಲಾಕ್‌ಡೌನ್‌ನಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಕೀರ್ತಿ ಪೊಲೀಸರಿಗೆ ಸಲ್ಲಬೇಕು. ಅವರ ಕಾರ್ಯವ್ಯಾಪ್ತಿ ಬದಲಾಗುತ್ತಿದ್ದು, ಜೀವನ ಕ್ರಮಕ್ಕೆ ಅನುಗುಣವಾಗಿ ಹೊಸ ತಂತ್ರಜ್ಞಾನ, ವಿಶೇಷ ತರಬೇತಿ ಅಗತ್ಯವಿದೆ. ಪೊಲೀಸರ ಅವರ ಕುಟುಂಬದ ಸುರಕ್ಷತೆ, ಜೀವ ಮತ್ತು ಜೀವನ ಕಟ್ಟಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದಕ್ಕಾಗಿ ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆ ಸುಧಾರಣಿಗೆ ಸಮಿತಿ :
ರಾಜ್ಯ ಪೊಲೀಸ್ ಇಲಾಖೆಯ ಅಮೂಲಾಗ್ರ ಬದಲಾವಣೆಗೆ ಡಿಜಿಪಿ ಪ್ರವೀಣ್ ಸೂದ್ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಪೊಲೀಸ್ ಇಲಾಖೆಯ ಪುನಾರಚನೆಯಾಗಿಲ್ಲ. ಹಳೇ ವ್ಯವಸ್ಥೆ ಮುಂದುವರೆದಿದೆ. ಪೊಲೀಸರು ಮತ್ತು ಅವರ ಕುಟುಂಬದ ಸಂರಕ್ಷಣೆ ಹಾಗೂ ಸಾಮಾಜಿಕ ಬದುಕಿನ ಭದ್ರತೆ ದೃಷ್ಟಿಯಿಟ್ಟುಕೊಂಡು ಸುಧಾರಣಾ ನೀತಿಗಳನ್ನು ರೂಪಿಸಲಾಗುತ್ತಿದೆ.
ಕರೊನಾ ಹೋರಾಟದಲ್ಲಿ ಮಡಿದ ಪೊಲೀಸರ ನೆನಪಿಗೆ ಸೈನ್ಯದ ಮಾದರಿ ಸಂಸ್ಮರಣಾ ಸ್ಮಾರಕ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ನಗರದಲ್ಲಿ ಸೂಕ್ತ ಜಾಗ ಗುರುತಿಸಲಾಗುತ್ತಿದೆ.
ಸಿಸಿಬಿಗೆ 1 ಎಸಿಪಿ, 3 ಪಿಐ
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಹಾಗೂ ಡ್ರಗ್ಸ್ ಪ್ರಕರಣಗಳ ಸೇರಿದಂತೆ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳ ತನಿಖೆ ನಡೆಸುವ ಸಿಸಿಬಿ ಬಲವರ್ಧನೆಗೆ ಸರ್ಕಾರ ಪ್ರಾಮುಖ್ಯತೆ ನೀಡಿದೆ. ಈ ಸಂಬಂಧ ಸಿಸಿಬಿಗೆ ಹೊಸದಾಗಿ ಓರ್ವ ಎಸಿಪಿ, ಮೂವರು ಇನ್‌ಸ್ಪೆಕ್ಟರ್‌ಗಳು, 6 ಎಸ್‌ಐ ನೇಮಿಸಲು ಆದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜರಾಜೇಶ್ವರಿನಗರದ ಕ್ಷೇತ್ರ ಉಪ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎಂಬುದು ಸರ್ಕಾರದ ಆಶಯ. ತಂಟೆ-ತಕಾರರು ತೆಗೆದು ಗದ್ದಲ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಬಸವರಾಜ್ ಬೊಮ್ಮಾಯಿ-ಗೃಹ ಸಚಿವ