

ಗುಂಡ್ಲುಪೇಟೆ: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಕ್ಷಣ ಕ್ರಾಂತಿ ಸಾಧ್ಯವಾಯಿತು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳಿಂದ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 107ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತೃ ಹೃದಯ ಹೊಂದಿದ್ದ ಶ್ರೀಗಳು ಸಮಾಜ ಸುಧಾರಣೆಗೆ ಶಿಕ್ಷಣ ಮುಖ್ಯವೆಂದು ಅರಿತಿದ್ದರು. ಹಿಂದೆ ಶಿಕ್ಷಣ ಕೊಡಿಸುವುದು ಸವಾಲಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ತೆರೆದು ಶಿಕ್ಷಣ ಕ್ರಾಂತಿಗೆ ನಾಂದಿಯಾದರು ಎಂದು ತಿಳಿಸಿದರು.
ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಮಾತನಾಡಿ, ಗ್ರಾಮಿಣ ಭಾಗ ಸೇರಿದಂತೆ ದೇಶ, ವಿದೇಶಗಳಲ್ಲಿಯೂ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು 300ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆ ತೆರೆದು ಧೃವತಾರೆಯಂತೆ ಪ್ರಕಾಶಿಸುತ್ತಿದ್ದಾರೆ. ನಮ್ಮ ಮದುವೆಗೂ ಆಗಮಿಸಿ ಆಶೀರ್ವದಿಸಿದ್ದರು ಎಂದು ಸ್ಮರಿಸಿದರು.
ವಾಟಾಳು ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಮುಖ್ಯ ಭಾಷಣಕಾರ ಡಿ.ಎಸ್.ಸದಾಶಿವಮೂರ್ತಿ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್ ಮಾತನಾಡಿದರು. ಇದಕ್ಕೂ ಮುನ್ನ ರಾಜೇಂದ್ರ ಸ್ವಾಮೀಜಿ ಭಾವಚಿತ್ರವನ್ನು ಬೆಳ್ಳಿಯ ಸಾರೋಟಿನಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ.ಸಿ.ಬಸಪ್ಪದೇವರು, ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್, ರೈತ ಮುಖಂಡ ಕಡಬೂರು ಮಂಜುನಾಥ್, ಪ್ರಾಂಶುಪಾಲ ಮರಿಸ್ವಾಮಪ್ಪ ಇತರರು ಇದ್ದರು.