

ಶಿವಮೊಗ್ಗ: ಶಿವಮೊಗ್ಗದ ಹಿರಿಯ ಪತ್ರಕರ್ತ ಮಿಂಚು ಶ್ರೀನಿವಾಸ್ (ಎ.ವಿ.ಶ್ರೀನಿವಾಸ್) ಅವರ ಸ್ಮರಣಾರ್ಥ ನೀಡುವ ಮಿಂಚು ಶ್ರೀನಿವಾಸ್ ಪತ್ರಿಕಾ ಪ್ರಶಸ್ತಿಗೆ ಗದಗಿನ ನವೋದಯ ಪತ್ರಿಕೆ ಸಂಪಾದಕ ರಾಜೀವ ಕಿದಿಯೂರ ಹಾಗೂ ಚಿಕ್ಕಮಗಳೂರಿನ ಎಸ್.ಗಿರಿಜಾಶಂಕರ ಆಯ್ಕೆಯಾಗಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಬ್ಬರು ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದ್ದು, 11ನೇ ವಾರ್ಷಿಕ ಪ್ರಶಸ್ತಿಯು ಗದಗಿನ ರಾಜೀವ್ ಹಾಗೂ 12ನೇ ವಾರ್ಷಿಕ ಪ್ರಶಸ್ತಿಯು ಚಿಕ್ಕಮಗಳೂರಿನ ಗಿರಿಜಾಶಂಕರ ಅವರಿಗೆ ಸಂದಿದೆ. ಡಾ. ಪಾಟೀಲ್ ಪುಟ್ಟಪ್ಪ, ಡಾ. ಎಚ್.ಎಸ್.ದೊರೆಸ್ವಾಮಿ, ನಾಗೇಶ್ ಹೆಗಡೆ ಸೇರಿ 10 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವೈದ್ಯನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜೀವ ಕಿದಿಯೂರ ಅವರು ಗದಗ ನಗರಕ್ಕೆ ಸೀಮಿತವಾಗಿದ್ದ ಪತ್ರಿಕೆಯನ್ನು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಬಹುಭಾಗದ ಪ್ರಾದೇಶಿಕ ಪತ್ರಿಕೆಯಾಗಿ ಹೊರಬರುವಂತೆ ಶ್ರಮಿಸಿದ್ದಾರೆ. ಎರಡು ಅವಧಿಗೆ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರದಿಂದ ನೀಡುವ ಮೊಹರೆ ಹಣಮಂತರಾಯ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪತ್ರಿಕೆಗೆ ಆಂದೋಲನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ಎಸ್.ಗಿರಿಜಾಶಂಕರ್ ಅವರು 37 ವರ್ಷ ಸುದೀರ್ಘವಾಗಿ ಚಿಕ್ಕಮಗಳೂರಿನ ಜನಮಿತ್ರ ಪತ್ರಿಕೆ ಸಂಪಾದಕರಾಗಿ, ಎಂಟು ವರ್ಷ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರದ ವನ್ಯಜೀವಿ ಮಂಡಳಿ ಸದಸ್ಯ, ಕುವೆಂಪು ಭಾಷಾ ಭಾರತಿ ಸದಸ್ಯರಾಗಿ ಪರಿಸರ ಮತ್ತು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಅಂತಾರಾಷ್ಟ್ರೀಯ ರೋಟರಿ ಪ್ರಶಸ್ತಿ ಪಡೆದಿದ್ದಾರೆ ಎಂದು ಹೇಳಿದರು.
ಸಿ.ಆರ್.ಭಟ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಸಾಮಾಜಿಕ ಪುರಸ್ಕಾರವನ್ನು ಭರತನಾಟ್ಯ, ಯಕ್ಷಗಾನ ಕಲಾವಿದೆ ಮಂಗಳೂರಿನ ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರಿಗೆ, ಬಂಕಾಪುರದ ನಿವೃತ್ತ ಶಿಕ್ಷಕ ದತ್ತಾಶ್ರಯ ಕುಲಕರ್ಣಿ ಅವರ ಸ್ಮರಣಾರ್ಥ ಶಿಕ್ಷಣ ಸಿರಿ ಪ್ರಶಸ್ತಿಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ 9 ಬಂಗಾರದ ಪದಕ ಪಡೆದ ಕುಮಾರ ದಾದಾಗೌಡ ಪಾಟೀಲ್ ಅವರಿಗೆ, ಎಂ.ಎಲ್.ಜೋಶಿ ಸ್ಮರಣಾರ್ಥ ರಂಗ ಪುರಸ್ಕಾರವನ್ನು ಧಾರವಾಡದ ಯಕ್ಷಗಾನ ಭಾಗವತ ಮಂಜುನಾಥ ಹೆಗಡೆ ಅವರಿಗೆ ನೀಡಲಾಗುವುದು ಎಂದರು.
ಶ್ರೀನಿವಾಸ್ ಅವರ ಪುತ್ರ ಎ.ಎಸ್.ರವಿಕುಮಾರ್, ಸೊಸೆ ಜ್ಯೋತಿ ರವಿಕುಮಾರ್, ಮೊಮ್ಮಗಳು ಸುರಭಿ ಅಡಿಗ, ಅನಿಲ್ ಮತ್ತು ಅಶ್ವತ್ಥ್ ಸುದ್ದಿಗೋಷ್ಠಿಯಲ್ಲಿದ್ದರು.
ಡಿ.1ರಂದು ಪ್ರಶಸ್ತಿ ಪ್ರದಾನ
ಧಾರವಾಡದ ಸಾಕಾರ(ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ) ಹಾಗೂ ಶಿವಮೊಗ್ಗದ ಮಿಂಚು ಶ್ರೀನಿವಾಸ್ ಕುಟುಂಬದಿಂದ ಡಿ.1ರಂದು ಸಂಜೆ 5ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವ್ಯಾಸ ದೇಶಪಾಂಡೆ ಪಾಲ್ಗೊಳ್ಳುವರು. ಸಾಕಾರ ಗೌರವಾಧ್ಯಕ್ಷೆ ವಿದುಷಿ ನಾಗರತ್ನಾ ಹಡಗಲಿ, ಕಾರ್ಯಾಧ್ಯಕ್ಷೆ ಡಾ. ಸಿ.ಶುಭದಾ ಉಪಸ್ಥಿತರಿರುವರು.