ರಾಜಕೀಯಕ್ಕೆ ಕೃಷಿ ಕಾಯ್ದೆ ಬಲಿ; ಚಿಂತನ ಗಂಗಾ ಸರಣಿಯಲ್ಲಿ ಡಾ.ಆನಂದ ರಂಗನಾಥನ್ ವಿಷಾದ

Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೇಂದ್ರ ಸರ್ಕಾರ ಜಾರಿಗೊಳಿಸಿ, ವಾಪಸು ಪಡೆದ ಮೂರು ಕೃಷಿ ಕಾಯ್ದೆಗಳು ರೈತರ ಪರ ಉತ್ತಮ ಕಾಯ್ದೆಯಾಗಿದ್ದರೂ, ರಾಜಕೀಯ ಕಾರಣಗಳಿಗೆ ಬಲಿಯಾಯಿತು ಎಂದು ವಿಜ್ಞಾನಿ, ಸಂಶೋಧಕ ಡಾ.ಆನಂದ ರಂಗನಾಥನ್ ವಿಷಾದವ್ಯಕ್ತಪಡಿಸಿದರು.
ಸ್ವಚ್ಛ ಮಂಗಳೂರು ೌಂಡೇಶನ್ ಮತ್ತು ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ೌಂಡೇಶನ್ ವತಿಯಿಂದ ರಾಮಕೃಷ್ಣ ಮಠದಲ್ಲಿ ಆಯೋಜಿಸಿದ ‘ಜಿಜ್ಞಾಸಾ ಸನಾತನ ಚಿಂತನ ಗಂಗಾ’ ಸರಣಿ ಉಪನ್ಯಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ‘ಭಾರತ 2047- ಅವಕಾಶಗಳ ತಾಣ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕೃಷಿ ಕಾಯ್ದೆಯ ವಾಪಸಾತಿ ಸ್ವಾತಂತ್ರೃ ಬಳಿಕ ದೇಶ ತೆಗೆದುಕೊಂಡ ಅತ್ಯಂತ ಕೆಟ್ಟ ತೀರ್ಮಾನಗಳಲ್ಲಿ ಒಂದು. ಹೊಸ ಕೃಷಿ ಕಾಯ್ದೆಯನ್ನು ಬೆಂಬಲಿಸುವ ರೈತರು ದೊಡ್ಡ ಸಂಖ್ಯೆಯಲ್ಲಿದ್ದರೂ ಅವರಲ್ಲಿ ಹೆಚ್ಚಿನವರು ರಸ್ತೆಗೆ ಇಳಿಯಲಿಲ್ಲ. ಅವರ ಧ್ವನಿ ಕೇಳಲೇ ಇಲ್ಲ. ಆದ್ದರಿಂದ ಪ್ರಸ್ತುತ ಭಾರತ ಅವಕಾಶಗಳ ನೆಲವಾಗಿ ಉಳಿದಿಲ್ಲ; ಬದಲಾಗಿ ಅವಕಾಶಗಳನ್ನು ಕಳೆದುಕೊಂಡ ನೆಲವಾಗಿದೆ. 30 ವರ್ಷಗಳ ಹಿಂದೆ ದೇಶ ಅವಕಾಶಗಳ ನೆಲವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಆಶೀರ್ವಚನ ನೀಡಿದ ರಾಮಕೃಷ್ಣ ಮಠ ಮಂಗಳೂರು ಅಧ್ಯಕ್ಷ ಸ್ವಾಮಿ ಜಿತಕಾಮಾನಂದ, ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆ ಅನನ್ಯ ಮತ್ತು ಅವಿಸ್ಮರಣೀಯ. ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಭಾರತವು ವಿಶ್ವನಾಯಕನ ಸ್ಥಾನದತ್ತ ಸಾಗುತ್ತಿದೆ ಎಂದರು.
ನಿಟ್ಟೆ ಡೀಮ್ಡ್ ಟುಬಿ ಯುನಿವರ್ಸಿಟಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಆನಂದ್ ರಂಗನಾಥನ್ ಅವರ ಕೃತಿ ‘ಹಿಂದೂಸ್ ಇನ್ ಹಿಂದು ರಾಷ್ಟ್ರ’ವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮ ಸಂಚಾಲಕ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸಹ ಸಂಚಾಲಕ ಪ್ರೊ.ಧನೇಶ್ ಕುಮಾರ್ ವಂದಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.

(((ಬಾಕ್ಸ್)))

ಭಾರತ ವಿಶ್ವ ವ್ಯಾಕ್ಸಿನ್ ಹಬ್
ಕೋವಿಡ್ ಸಂದರ್ಭ ಭಾರತ ತನ್ನ ನೈಜ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು ಎಂದು ಡಾ.ಆನಂದ ರಂಗನಾಥನ್ ಹೇಳಿದರು. ಕೋವಿಡ್‌ಗೆ ಪರಿಣಾಮಕಾರಿ ವ್ಯಾಕ್ಸಿನ್ ಶೋಧನೆ ಮೂಲಕ ‘ವಿಶ್ವದ ವ್ಯಾಕ್ಸಿನ್ ಹಬ್’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವಿಶ್ವದ ಎರಡು ಬಿಲಿಯನ್ ಜನರಿಗೆ ವ್ಯಾಕ್ಸಿನ್ ಪೂರೈಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಗಮನ ಸೆಳೆಯಿತು. ಕೋವಿಡ್ ನಿರ್ವಹಿಸುವಲ್ಲಿ ಜಗತ್ತಿಗೆ ತನ್ನದೇ ವಿಶೇಷ ಕೊಡುಗೆಯನ್ನಿ ಭಾರತ ನೀಡಿದೆ ಎಂದರು.

((ಕ್ವೋಟ್))

ಭಾರತ ಹಿಂದೆ ಹಲವಾರು ಅವಕಾಶಗಳನ್ನು ಕೈ ಚೆಲ್ಲಿತ್ತು. ಆದರೆ ಇಂದು ಅವಕಾಶಗಳನ್ನು ಸದುಪಯೋಗಪಡಿಸಿ ಮುನ್ನಡೆಯುವ ದೇಶವಾಗಿ ಬದಲಾಗಿದೆ. ಇಂದು ನಮ್ಮ ಮುಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಮುಂದಿನ 25 ವರ್ಷಗಳು ಭಾರತದ ಇತಿಹಾಸದಲ್ಲಿ ಅಮೃತ ಕಾಲವಾಗಲಿದೆ.
- ಡಾ.ಆನಂದ ರಂಗನಾಥನ್
ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net