ರಾಗಿ ಮಾರಾಟ ಸಮಸ್ಯೆ ಬಗೆಹರಿಸುವ ಭರವಸೆ : ಶಾಸಕ ಎ.ಮಂಜುನಾಥ್

5
Published on

ಮಾಗಡಿ: ಅತಿವೃಷ್ಟಿಯಿಂದ ತಾಲೂಕಿನಲ್ಲಿ ರಾಗಿ ಬೆಳೆಗೆ ಸಾಕಷ್ಟು ಹಾನಿಯಾಗಿದ್ದು, ಉಳಿದ ಬೆಳೆಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಳ್ಳುವಂತೆ ಶಾಸಕ ಎ. ಮಂಜುನಾಥ್ ರೈತರಿಗೆ ಕರೆ ನೀಡಿದರು.

ಪಟ್ಟಣದ ಗುಡೇಮಾರನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಅಕ್ಕಿ ಗೋದಾಮಿಗೆ ಗುರುವಾರ ಭೇಟಿ ನೀಡಿ ರಾಗಿ ಖರೀದಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು. ರಾಗಿ ಖರೀದಿ ವೇಳೆ ರೈತರು ಪಹಣಿ ನಮೂದಿಸಿದ ಮೇಲೆ ಟೋಕನ್ ನೀಡಲಾಗುತ್ತಿದೆ. 5 ಎಕರೆ ಮೇಲ್ಪಟ್ಟವರನ್ನು ದೊಡ್ಡ ರೈತರೆಂದು ಪರಿಗಣಿಸಿರುವುದರಿಂದ ರಾಗಿ ಮಾರಾಟಕ್ಕೆ ಅವಕಾಶ ಸಿಗುತ್ತಿಲ್ಲ. ಇದು ತಾಲೂಕಿನ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯದ ಸಮಸ್ಯೆ. 5 ಎಕರೆ ಒಳಗಿರುವವರ ರಾಗಿ ಖರೀದಿಗೆ ಮಾತ್ರ ಸರ್ಕಾರ ತಂತ್ರಜ್ಞಾನ ಸಿದ್ಧಪಡಿಸಿದೆ. ಈ ಬಗ್ಗೆ ಕೃಷಿ ಆಯುಕ್ತರು ಮತ್ತು ಸಚಿವರ ಜತೆ ಚರ್ಚಿಸಿ, 5 ಎಕರೆ ಮೇಲ್ಪಟ್ಟವರ ರಾಗಿ ಖರೀದಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಹಾಗೂ ತಾಂತ್ರಿಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಖರೀದಿ ಮ್ಯಾನೇಜರ್ ಬಿ.ವಿ. ಜಯರಾಮಯ್ಯ ಮಾತನಾಡಿ, ತಾಲೂಕಿನಲ್ಲಿ 6 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದು, 3 ಸಾವಿರ ಅರ್ಜಿಗಳು ಸ್ವೀಕೃತಗೊಂಡಿವೆ. ಕರೊನಾ ಕಾರಣದಿಂದಾಗಿ ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸದೇ ತಕ್ಷಣ ನೋಂದಣಿ ಮಾಡಿ ಕಳಿಸಲಾಗುತ್ತಿದೆ. ಜ.31ರವರೆಗೆ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶವಿರಲಿದೆ ಎಂದರು.

ಪುರಸಭೆ ಅಧ್ಯಕ್ಷೆ ವಿಜಯಾ ರೂಪೇಶ್, ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್.ಮಂಜುನಾಥ್, ಅಶ್ವತ್ಥ, ಅನಿಲ್ ಕುಮಾರ್, ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net